ಶಬ್ನಂ ಹಾಶ್ಮಿಗೆ ಕೊಲೆ ಬೆದರಿಕೆ: ಪೊಲೀಸರಿಗೆ ನೋಟಿಸ್ ನೀಡಿದ ಅಲ್ಪಸಂಖ್ಯಾತರ ಆಯೋಗ
ಹೊಸದಿಲ್ಲಿ,ಜು.23: ಪ್ರಮುಖ ಸಾಮಾಜಿಕ ಕಾರ್ಯಕರ್ತೆ ಶಬ್ನಂ ಹಾಶ್ಮಿಯನ್ನು ನಕಲಿ ಎನ್‍ಕೌಂಟರ್ ಮೂಲಕ ಕೊಲ್ಲುವುದಾಗಿ ಬೆದರಿಕೆಹಾಕಿದ ಪೊಲೀಸರಿಗೆ ದಿಲ್ಲಿ ಅಲ್ಪಸಂಖ್ಯಾತರ ಆಯೋಗ ನೋಟಿಸ್ ಜಾರಿಮಾಡಿದೆ. ಬೆದರಿಕೆಯಲ್ಲಿ ದಿಲ್ಲಿಪೊಲೀಸರ ಪಾತ್ರವೇನು ಎಂದು ತನಿಖೆ ನಡೆಸಬೇಕೆಂದು ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಝಫರುಲ್ ಇಸ್ಲಾಂ ಖಾನ್ ಪೊಲೀಸ್ ಕಮಿಶನರಿಗೆ ನೋಟಿಸ್ ನೀಡಿದ್ದಾರೆ.
ಶಬ್ನಂ ಹಾಶ್ಮಿಯವರಿಗೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಕಳೆದ ದಿವಸ ಬಂಧಿಸಿದ್ದಾರೆ. ಈತನೇ ಬೆದರಿಕೆ ಹಾಕಿದ್ದಾನೆಎಂದು ಸ್ಪಷ್ಟವಾಗಲು ಫೋರೆನ್ಸಿಕ್ ಪರಿಶೀಲನೆ ನಡೆಸಬೇಕು ಎಂದು ಆಯೋಗ ಹೇಳಿದೆ.ದಿಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಎಂದು ಪರಿಚಯಿಸಿಕೊಂಡ ಸಂದೀಪ್ ಮಾಲಿಕ್ ಎಂಬ ವ್ಯಕ್ತಿ ಶಬ್ನಂ ಹಾಶ್ಮಿಗೆ ಬೆದರಿಕೆ ಹಾಕಿದ್ದನು.
ದೇಶದಲ್ಲಿ ಆಧಾರ್ ನಂಬರ್ ಹೊಂದದವರನ್ನು ಸುತ್ತುವರಿದು ಕೊಲ್ಲಬೇಕೆಂದು ಮೇಲಿನಿಂದ ಆದೇಶವಿದೆ ಎಂದು ಫೋನ್‍ನಲ್ಲಿ ಈತ ಬೆದರಿಕೆ ಹಾಕಿದ್ದನು. ಫೋನ್‍ನ ಕಾಲರ್ ಐಡಿಯನ್ನು ಪರಿಶೀಲಿಸಿದಾಗ ಅದು ಪೊಲೀಸರ ಫೋನೆಂದು ತಿಳಿದು ಬಂತು ಎಂದು ಹಾಶ್ಮಿ ಹೇಳಿದ್ದಾರೆ.