ಮಹಾಮೈತ್ರಿ ಒಗ್ಗಟ್ಟು ಉಳಿಸುವ ಉದ್ದೇಶದಿಂದ ರಾಹುಲ್-ನಿತೀಶ್ ಮಾತುಕತೆ: ಜೆಡಿಯು

Update: 2017-07-23 12:17 GMT

ಹೊಸದಿಲ್ಲಿ, ಜು.23: ಬಿಹಾರದಲ್ಲಿ ಮಹಾಮೈತ್ರಿಯ ಒಗ್ಗಟ್ಟನ್ನು ಉಳಿಸಿ ಮೈತ್ರಿಯನ್ನು ಸಶಕ್ತಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಧ್ಯೆ ಮಾತುಕತೆ ನಡೆದಿದೆ ಎಂದು ಜೆಡಿಯು ತಿಳಿಸಿದೆ.

 ಇದೊಂದು ಸೌಜನ್ಯದ ಭೇಟಿಯಾಗಿತ್ತು. ಭ್ರಷ್ಟಾಚಾರದ ಕುರಿತು ರಾಹುಲ್ ಗಾಂಧಿ ಹಾಗೂ ನಿತೀಶ್ ಕುಮಾರ್ ಇಬ್ಬರ ದೃಷ್ಟಿಕೋನವೂ ಒಂದೇ ಆಗಿದೆ. ದೇಶದಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ ಎಂಬ ಭಾವನೆ ಇಬ್ಬರಲ್ಲೂ ಇದೆ ಎಂದು ಜೆಡಿಯು ಮುಖಂಡ ಕೆ.ಸಿ.ತ್ಯಾಗಿ ಹೇಳಿದರು.

ಈ ಭೇಟಿಯ ಮೂಲಕ ಮಹಾಮೈತ್ರಿಯನ್ನು ಬಲಿಷ್ಠವಾಗಿಯೇ ಇರಿಸಿಕೊಳ್ಳುವ ಸಂದೇಶವನ್ನು ಮೂರೂ ಪಕ್ಷಗಳಿಗೆ ನೀಡಲಾಗಿದೆ. ಮಹಾಮೈತ್ರಿ ಮೂರೂ ಪಕ್ಷಗಳಿಗೆ ಸೇರಿದೆ. ಮಹಾಮೈತ್ರಿಗೆ ಯಾವುದೇ ಬಿಕ್ಕಟ್ಟು ಎದುರಾಗಿಲ್ಲ, ಆದರೆ ಪ್ರಕ್ಷುಬ್ದತೆಯ ಪರಿಸ್ಥಿತಿ ಇದಿರಾಗಿದೆ. ಸಂಬಂಧಿತ ಪಕ್ಷಗಳು ವಿಶ್ವಾಸದಿಂದ ಕಾರ್ಯ ನಿರ್ವಹಿಸಿದರೆ ಎಲ್ಲಾ ಸರಿಯಾಗುತ್ತದೆ ಎಂದವರು ಹೇಳಿದರು.

 ನಿರ್ಗಮಿಸಲಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಗೌರವಾರ್ಥ ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಆಮಿಸಿದ್ದ ನಿತೀಶ್ ಕುಮಾರ್, ಶನಿವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದರು. ಬಿಹಾರದ ಉಪಮುಖ್ಯಮಂತ್ರಿ, ಲಾಲೂಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ವಿರುದ್ಧದ ಭ್ರಷ್ಟಾಚಾರ ಆರೋಪದ ಕುರಿತು ಉಭಯ ಮುಖಂಡರು ಚರ್ಚಿಸಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News