ಪ್ರತಿಭಾ ಪುರಸ್ಕಾರ, ಪ್ರಮಾಣ ಪತ್ರ ವಿತರಣೆ
ಉಡುಪಿ, ಜು.23: 2016-17ನೇ ಸಾಲಿನ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ರಾಜ್ಯ ಮಟ್ಟದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಉಡುಪಿ ಜಾಮಿಯಾ ಮಸೀದಿಯ ಸಭಾಂಗಣದಲ್ಲಿ ಜರಗಿತು. ಉಡುಪಿ, ಆದಿ ಉಡುಪಿ ಮತ್ತು ಕುಕ್ಕಿಕಟ್ಟೆ ಕೇಂದ್ರಗಳಲ್ಲಿ ನಡೆದ ಕಾರ್ಯ ಕ್ರಮದಲ್ಲಿ ರಾಜ್ಯ ಮಟ್ಟದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಅಫ್ಸಾ ಬೇಗಂ ಕಟಪಾಡಿ, ಸಮ್ರೀನ್ ಬೆಳಪು, ಹಾಗೂ ಫರ್ಝಾನಾ ಕುಕ್ಕಿಕಟ್ಟೆ ಅವರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಣಿಪಾಲ ವಿವಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಯ ಎಸೋಸಿಯೇಟ್ ಪ್ರೊಫೆಸರ್ ಡಾ.ಸಲಿನಾ ಉಮರ್ ವೆಲ್ಲ ದಾತ್ ಮಾತನಾಡಿದರು. ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಕರ್ನಾಟಕ ರಾಜ್ಯಾಧ್ಯಕ್ಷೆ ನವಿದಾ ಹುಸೈನ್ ಅಸಾದಿ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಮಹಿಳಾ ವಿಭಾಗದ ರಾಜ್ಯ ಹೊಣೆಗಾರರಾದ ಕುಲ್ಸೂಮ್ ಅಬೂಬಕರ್, ಸ್ಥಾನೀಯ ಹೊಣೆಗಾರರಾದ ಶಾಹಿದಾ ರಿಯಾಝ್ ಉಪಸ್ಥಿತರಿದ್ದರು. ಅದೀಬ್ ಕುರ್‌ಆನ್ ಪಠಿಸಿದರು. ನೂರ್‌ಜಹಾನ್ ಕಟಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಮ್ರಾನ್ ಆದಿಉಡುಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.