×
Ad

‘ಸರಿಗಮಪ’ ಖ್ಯಾತಿಯ ಪಾಕ್ ಗಾಯಕ ಝೈನ್ ಅಲಿ ನಿಗೂಢ ಸಾವು

Update: 2017-07-23 20:17 IST

ಲಾಹೋರ್,ಜು.23: 2012ರಲ್ಲಿ ಪ್ರಸಾರವಾದ ಭಾರತದ ಟಿವಿ ರಿಯಾಲಿಟಿ ಶೋ ‘ಸರಿಗಮಪ’ದಲ್ಲಿ ಸ್ಪರ್ಧಿಸಿ ಜನಪ್ರಿಯತೆ ಪಡೆದಿದ್ದ ಪಾಕಿಸ್ತಾನಿ ಗಾಯಕ ಝೈನ್ ಅಲಿ ನಿಗೂಢವಾಗಿ ಮೃತಪಟ್ಟಿರುವುದಾಗಿ ರವಿವಾರ ವರದಿಯಾಗಿದೆ. ಝೈನ್ ಅವರು ಲಾಹೋರ್ ಸಮೀಪದ ಶೇಖ್‌ಪುರದಲ್ಲಿರುವ ತನ್ನ ಗೆಳೆಯನ ನಿವಾಸದಲ್ಲಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಮೂಲತಃ ಲಾಹೋರ್‌ನವರಾದ ಝೈನ್ ಅಲಿ, ತನ್ನ ಗೆಳೆಯರನ್ನು ಭೇಟಿಯಾಗಲು ಗುರುವಾರ ಸುಲ್ತಾನ್‌ಪುರಕ್ಕೆ ತೆರಳಿದ್ದರೆಂದು ಅವರ ಸಹೋದರ ಸೋನು ಅಲಿ ತಿಳಿಸಿದ್ದಾರೆ.

 ಪ್ರಕರಣದ ಬಗ್ಗೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.ಆದಾಗ್ಯೂ, ಅತಿಯಾದ ಮಾದಕದ್ರವ್ಯ ಸೇವನೆಯೇ ಝೈನ್ ಅಲಿಯ ಸಾವಿಗೆ ಕಾರಣವೆಂಬ ಶಂಕೆಗಳು ವ್ಯಕ್ತವಾಗಿವೆ. ಆದರೆ ಸಹೋದರ ಸೋನು ಅಲಿ ಇದನ್ನು ನಿರಾಕರಿಸಿದ್ದಾರೆ. ಈ ಮಧ್ಯೆ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆಯು ಮೆದುಳಿನ ರಕ್ತಸ್ರಾವದಿಂದಾಗಿ ಝೈನ್ ಅಲಿ ಮೃತಪಟ್ಟಿರುವುದಾಗಿ ವರದಿ ಮಾಡಿದೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಝನ್ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.

 ‘ಸರಿಗಮಪ’ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ ಬಳಿಕ ಝೈನ್ ಭಾರತ ಹಾಗೂ ಪಾಕಿಸ್ತಾನದಲ್ಲಿ ಮನೆಮಾತಾಗಿದ್ದರು. ಆನಂತರ ಅವರು ಪಾಕಿಸ್ತಾನದ ಜನಪ್ರಿಯ ಗಾಯಕರಲ್ಲೊಬ್ಬರೆನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News