ಪತ್ರಿಕಾ ಸ್ವಾತಂತ್ರ ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ : ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ

Update: 2017-07-23 15:14 GMT

ಬ್ರಹ್ಮಾವರ, ಜು.23: ಸಮಾಜ, ನ್ಯಾಯಾಲಯ, ಅಸೆಂಬ್ಲಿಗಳು ಮಾಧ್ಯಮ ದವರನ್ನು ರಕ್ಷಿಸುವಾಗ, ಜನಸಾಮಾನ್ಯರ ಹಕ್ಕನ್ನು ರಕ್ಷಿಸುವ ಹೊಣೆ ಮಾಧ್ಯಮದ ಮೇಲೆ ಇದೆ. ಸಮಾಜದ ಬಗ್ಗೆ ಚಿಂತನೆ ಮಾಧ್ಯಮದವರಿಗೆ ಇರಬೇಕು. ಅದೇ ರೀತಿ ಮಾಧ್ಯಮದವರ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ದ್ದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ.

ಬ್ರಹ್ಮಾವರ ಪ್ರೆಸ್ ಕ್ಲಬ್ ವತಿಯಿಂದ ರವಿವಾರ ಬ್ರಹ್ಮಾವರ ಬಂಟರ ಭವನ ದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಮೂರು ಅಂಗಗಳ ಜೊತೆಗೆ ಮಾಧ್ಯಮ ಕ್ಷೇತ್ರವೂ ಸಹ ಸಮಾನವಾಗಿ ಬೆಳೆದಿದೆ. ಪತ್ರಿಕೆಗಳು ಒಳ್ಳೆಯ ವಿಚಾರಗಳನ್ನು ಪ್ರಕಟಿಸಿದಲ್ಲಿ ಸಮಾಜದಲ್ಲಿ ಸ್ಥಾನಮಾನ, ಗೌರವ ಹೆಚ್ಚಾಗುತ್ತದೆ. ಒಳ್ಳೆಯ ಲೇಖನದೊಂದಿಗೆ ಜನಮನ ಗೆದ್ದ ವಡ್ಡರ್ಸೆ ರಘುರಾಮ ಶೆಟ್ಟಿ ಮಾಧ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಪತ್ರಿಕಾ ಕ್ಷೇತ್ರ ದಲ್ಲಿಯೂ ಸಾಕಷ್ಟು ಜವಾಬ್ದಾರಿಗಳಿವೆ. ಆತ್ಮಸಾಕ್ಷಿ ಶುದ್ಧವಾಗಿದಲ್ಲಿ ಯಾವ ಕ್ಷೇತ್ರದಲ್ಲಿಯೂ ಭಯ ಪಡಬೇಕಾದ ಅಗತ್ಯ ಇರುವುದಿಲ್ಲ ಎಂದು ಹೇಳಿದರು.

 ಪ್ರಶಸ್ತಿಯನ್ನು ಪತ್ರಕರ್ತ ರವಿ ಬೆಳಗೆರೆ ಪರವಾಗಿ ಹಾಯ್ ಬೆಂಗಳೂರು ಆಡಳಿತ ಮಂಡಳಿಯ ಆಡಳಿತಾಧಿಕಾರಿ ಉಮೇಶ್ ಹೆಗ್ಡೆ ಸ್ವೀಕರಿಸಿದರು. ಅಧ್ಯಕ್ಷತೆಯನ್ನು ಬ್ರಹ್ಮಾವರ ಪ್ರೆಸ್ ಕ್ಲಬ್ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿಗಳಾದ ಆನಂದ ಸಿ.ಕುಂದರ್, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಉಪಸ್ಥಿತರಿದ್ದರು. ಕ್ಲಬ್‌ನ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಸ್ವಾಗತಿಸಿದರು. ವಸಂತ ಗಿಳಿಯಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಹರೀಶ್ ಕಿರಣ್ ತುಂಗ ವಂದಿಸಿದರು. ಚಂದ್ರ ಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದ ಅಂಗವಾಗಿ ಆಯೋಜಿಸಲಾದ ಪತ್ರಿಕೋದ್ಯಮ ರಾಜಕೀಯ ಕಾನೂನು ವಿಷಯಾಧಾರಿತ ಪತ್ರಿಕೋದ್ಯಮ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ನೇರ ನಿಷ್ಠುರ ವಾಗಿ ಬರೆಯುವ ಪತ್ರಕರ್ತರಿದ್ದರೂ ಕೆಲವೊಂದು ಜನಪರ ಸುದ್ದಿಗಳು ಸಂಪಾದಕೀಯ ವಿಭಾಗದಲ್ಲಿ ಬದಲಾವಣೆಯಾಗಿ ಪ್ರಕಟಗೊಳ್ಳುವ ಸಾಧ್ಯತೆ ಗಳಿರುತ್ತವೆ. ಆದುದರಿಂದ ಪತ್ರಕರ್ತರ ಜೊತೆಗೆ ಜನತೆಯು ಕೂಡ ಬದ ಲಾವಣೆ ಬಯಸಿದ್ದಲ್ಲಿ ಮಾತ್ರ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಜ್ಞಾನ ವಸಂತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಶೇಷಗಿರಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪತ್ರಿಕಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News