×
Ad

ಹಣ ದ್ವಿಗುಣದ ಆಮಿಷ: ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂ. ಪಂಗನಾಮ

Update: 2017-07-23 21:56 IST

ಮಂಗಳೂರು, ಜು. 23: ಹಣ ದ್ವಿಗುಣ ಮಾಡಿ ಹಿಂತಿರುಗಿಸುತ್ತೇನೆಂದು ನಂಬಿಸಿ ನಗರದ ಕಾಲೇಜೊಂದರ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಆರೋಪದ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಯೋರ್ವನನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೂಲತಃ ಮುಂಬಯಿಯ ಸಾಂಗ್ಲಿ ನಿವಾಸಿ ವಿನೋದ್ (22) ಎಂದು ಗುರುತಿಸಲಾಗಿದೆ. ಈತನ ಕುಟುಂಬ ಕಳೆದ 25ವರ್ಷದಿಂದ ನಗರದ ಡೊಂಗರಕೇರಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದೆ.

 ಆರೋಪಿ ವಿನೋದ್ ತನ್ನದೇ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ತಲಪಾಡಿಯ ಸುನೀಲ್ ಶೆಟ್ಟಿ ಎಂಬಾತನಿಂದ ಮೇ 19ರಂದು ಇವೆಂಟ್ ಬಿಸಿನೆಸ್‌ಗಾಗಿ 3 ಲಕ್ಷ ರೂ. ಸಾಲ ಪಡೆದಿದ್ದ. ಈ ಸಂದರ್ಭ ಆತ ಸುನೀಲ್‌ಗೆ ಕಾರ್‌ಸ್ಟ್ರೀಟ್‌ನ ಬ್ಯಾಂಕೊಂದರ 3 ಚೆಕ್‌ಗಳನ್ನು ಸಹಿ ಮಾಡಿ ನೀಡಿದ್ದ. ಅಲ್ಲದೆ, ಒಂದು ಬಿಳಿ ಹಾಳೆಯಲ್ಲಿ ಒಂದು ವಾರದೊಳಗೆ ಹಣ ಹಿಂತಿರುಗಿಸುವುದಾಗಿ ಬರೆದು ಅದಕ್ಕೆ ಸಹಿ ಮಾಡಿದ್ದ. ಆದರೆ ಹೇಳಿದ ಸಮಯಕ್ಕೆ ಹಣ ಹಿಂತಿರುಗಿಸದ ಕಾರಣ ಸುನೀಲ್ ಅನುಮಾನಗೊಂಡು ವಿನೋದ್ ಬಳಿ ಹಣ ಹಿಂದಿರುಗಿಸುವಂತೆ ಕೇಳಿಕೊಂಡಾಗ ತಪ್ಪಿಸಿಕೊಳ್ಳುತ್ತಿದ್ದ. ಬಳಿಕ ಸುನಿಲ್ ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಬರ್ಕೆ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಈತ ಅದೇ ಕಾಲೇಜಿನ ಇನ್ನಷ್ಟು ವಿದ್ಯಾರ್ಥಿಗಳಿಂದ ಹಣ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಾದ ಅಶ್ವಿನ್, ಆಕಾಶ್, ಚೈತನ್ಯ, ಸಂದೀಪ್, ನಾಗರಾಜ್, ಯತೀಶ್ ಮತ್ತಿತರಿಂದ ಹಣ ಪಡೆಗು ಲಕ್ಷಾಂತರ ರೂ. ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News