ಮಅದನಿಗೆ ಜಾಮೀನು ನಿರಾಕರಣೆ: ಜು.26ರಂದು ಕೇರಳದಲ್ಲಿ ಹರತಾಳಕ್ಕೆ ಕರೆ
Update: 2017-07-24 19:20 IST
ಕಾಸರಗೋಡು, ಜು. 24: ಬೆಂಗಳೂರು ಜೈಲ್ ನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಪಿಡಿಪಿ ನಾಯಕ ಅಬ್ದುಲ್ ನಾಸರ್ ಮಅದನಿಗೆ ಜಾಮೀನು ನೀಡದಿರುವುದನ್ನು ಪ್ರತಿಭಟಿಸಿ ಜು. 26ರಂದು ಕೇರಳದಲ್ಲಿ ಹರತಾಳಕ್ಕೆ ಪಿಡಿಪಿ ಕೇರಳ ರಾಜ್ಯ ಸಮಿತಿ ಕರೆ ನೀಡಿದೆ. ಬೆಳಗ್ಗೆ 6 ರಿಂದ ಸಂಜೆ 6 ರ ತನಕ ಹರತಾಳ ನಡೆಯಲಿದೆ.
ಆಗಸ್ಟ್ 9ರಂದು ನಡೆಯಲಿರುವ ಪುತ್ರನ ವಿವಾಹಕ್ಕೆ ತೆರಳಲು ಜಾಮೀನು ನೀಡುವಂತೆ ಮಅದನಿ ಬೆಂಗಳೂರು ಎನ್ ಐ ಎ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ಸೋಮವಾರ ತಿರಸ್ಕರಿಸಿತ್ತು.
ಮಗನ ವಿವಾಹದಲ್ಲಿ ಪಾಲ್ಗೊಳ್ಳಲು ಹಾಗೂ ಅಸ್ವಸ್ಥರಾಗಿರುವ ತಾಯಿಯನ್ನು ನೋಡಲು ಆಗಸ್ಟ್ 1ರಿಂದ 7ತನಕ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.
ಮಅದನಿ ಪುತ್ರ ಉಮ್ಮರ್ ಮುಖ್ತಾರ್ ವಿವಾಹ ಆಗಸ್ಟ್ 9ರಂದು ತಲಶ್ಯೆರಿಯಲ್ಲಿ ನಡೆಯಲಿದೆ. ಬೆಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 31ನೆ ಆರೋಪಿಯಾಗಿರುವ ಮಅದನಿ ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.