ಸರಕಾರಿ ಬಸ್‌ನಲ್ಲಿ ಬಾಲಕಿಯ ಅತ್ಯಾಚಾರ: ಪ್ರಕರಣ ಉಡುಪಿಯಿಂದ ರಾಣೆಬೆನ್ನೂರು ಪೊಲೀಸ್ ಠಾಣೆಗೆ ವರ್ಗ
ಉಡುಪಿ, ಜು.24: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಜು. 5ರಂದು ಸರಕಾರಿ ಬಸ್‌ನಲ್ಲಿ ನಡೆದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆಯಿಂದ ರಾಣೆಬೆನ್ನೂರು ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಈ ಘಟನೆಯು ರಾಣೆಬೆನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಉಡುಪಿ ಪೊಕ್ಸೊ ವಿಶೇಷ ನ್ಯಾಯಾಲಯದ ಅನುಮತಿಯಂತೆ ಈ ಪ್ರಕರಣವನ್ನು ಜು.19ರಂದು ರಾಣೆಬೆನ್ನೂರು ನಗರ ಪೊಲೀಸ್ ಠಾಣೆಗೆ ವರ್ಗಾಯಿಸಿ, ಪ್ರಕರಣ ದಾಖಲಿಸಲಾಗಿದೆ.
ಜು.5ರಂದು ಹಾವೇರಿ ಜಿಲ್ಲೆಯ ಹೀರೆಕೆರೆಯೂರಿಗೆ ಹೋಗಿದ್ದ ಉಡುಪಿ ಎಂಜಿಎಂ ಕಾಲೇಜಿನ ಬಳಿ ವಾಸ್ತವ್ಯ ಇರುವ ಬೆಳಗಾಂ ಮೂಲದ 15ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿರುವುದಾಗಿ ಜು.6ರಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜು.5ರಂದು ರಾತ್ರಿ 12ಗಂಟೆ ಸುಮಾರಿಗೆ ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾದ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಮೂವರು ಚಾಲಕ ಕಂ ನಿರ್ವಾಹಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ ರಾಣೆಬೆನ್ನೂರು ಘಟಕದ ಚಾಲಕ/ನಿರ್ವಾಹಕ ರಾಘವೇಂದ್ರ ಪ್ರಭಾಕರ ಬಡಿಗೇರಾ ಯಾನೆ ರಾಘು(35), ಹೀರೆಕೆರೆಯೂರು ಘಟಕದ ಚಾಲಕ/ನಿರ್ವಾಹಕರಾದ ಯುವರಾಜ್ ಕಟ್ಟೆ ಕಾರ್(35) ಮತ್ತು ವೀರಯ್ಯ ಆರ್.ಹಿರೇಮಠ(41) ಅವರನ್ನು ಉಡುಪಿ ಪೊಲೀಸರು ಜು.9ರಂದು ರಾಣೆಬೆನ್ನೂರಿನಲ್ಲಿ ಬಂಧಿಸಿ, ಉಡುಪಿ ನಗರ ಮಹಿಳಾ ಠಾಣೆಯಲ್ಲಿ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅದೇ ದಿನ ರಾತ್ರಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಎಲ್ಲ ಆರೋಪಿಗಳನ್ನು ಜು.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಆ.7ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ
ಉಡುಪಿಯ ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳನ್ನು ಅವರ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ಉಡುಪಿ ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳನ್ನು ಜು.23ರಂದು ಹಾವೇರಿಗೆ ಕರೆದುಕೊಂಡು ಹೋಗಲಾಗಿತ್ತು.
ಇಂದು ಬೆಳಗ್ಗೆ ಎಲ್ಲ ಮೂವರು ಆರೋಪಿಗಳನ್ನು ಹಾವೇರಿ ಜಿಲ್ಲಾ ಪೊಕ್ಸೊ ವಿಶೇಷ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದರು. ನ್ಯಾಯಾಯಲವು ಆರೋಪಿಗಳಿಗೆ ಆ. 7ರವರೆಗೆ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿತು. ಅದರಂತೆ ಆರೋಪಿಗಳನ್ನು ಹಾವೇರಿ ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಯಿತು. ಈ ಮೂವರು ಆರೋಪಿಗಳನ್ನು ಕೆಎಸ್ಸಾರ್ಟಿಸಿ ಈಗಾಗಲೇ ಕರ್ತವ್ಯದಿಂದ ಅಮಾನತುಗೊಳಿಸಿದೆ.