ಜು.30: ಸರ್ಕಾರಿ ಹೊರಗುತ್ತಿಗೆ ನೌಕರರ ಸಮಾಲೋಚನಾ ಸಭೆ
ಪುತ್ತೂರು, ಜು. 24: ಜಿಲ್ಲೆಯ ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ವಿವಿಧ ಇಲಾಖೆಗಳಲ್ಲಿರುವ ಹಾಗೂ ಸಂಸ್ಥೆಗಳಲ್ಲಿರುವ ಗುತ್ತಿಗೆ ಆಧಾರಿತ ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜು.30ರಂದು ಬೆಳಗ್ಗೆ 10 ಗಂಟೆಗೆ ಪುತ್ತೂರಿನ ಪೂಜಾ ಹೋಟೆಲ್‌ನಲ್ಲಿ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಸಮಾಲೊಚನಾ ಸಭೆ ನಡೆಸಲಾಗುವುದು ಎಂದು ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ತಿಳಿಸಿದರು.
ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊರಗುತ್ತಿಗೆ ನೌಕರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸಮಾಲೋಚಿಸಿ ಮುಂದೆ ಸರ್ಕಾರದ ಮುಂದಿಡಲು ಈ ಪ್ರಯತ್ನ ನಡೆಸಲಾಗುತ್ತಿದೆ. ಖಾಯಂ ನೌಕರರಿಗಿಂತ ಹೆಚ್ಚು ದುಡಿಮೆ, ಕನಿಷ್ಟ ವೇತನ, ಸಮಯಕ್ಕೆ ಸರಿಯಾಗಿ ವೇತನ ನೀಡದೇ ಇರುವುದು, ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಕೆಲಸ ಖಾಯಂ ಮಾಡದೇ ಇರುವುದು. ಅಧಿಕಾರಿಗಳಿಂದ ಅತಿಯಾದ ಕೆಲಸದ ಒತ್ತಡ ಮೊದಲಾದ ವಿಚಾರಗಳ ಬಗೆಗೆ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಹೊರಗುತ್ತಿಗೆ ಆಧಾರಿತ ನೆಲೆಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಸಮಸ್ಯೆಗಳ ಪರಿಹಾರ ಹಾಗೂ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವ ರನ್ನೇ ಖಾಯಂ ಮಾಡಬೇಕು ಎಂದು ಸರ್ಕಾರ ಮೇಲೆ ಒತ್ತಡ ತರುವ ಕೆಲಸ ದಲಿತ್ ಸೇವಾ ಸಮಿತಿ ನಡೆಸಲಿದೆ. ಮೆಸ್ಕಾಂ ಇಲಾಖೆಯಲ್ಲಿ ಮೀಟರ್ ರೀಡರ್ ಆಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೌಕರರ ಸಂಬಳ ಹೆಚ್ಚಿಸವ ಕೆಲಸವನ್ನು ಈ ಹಿಂದೆ ಮಾಡಲಾಗಿದೆ ಎಂದ ಅವರು ಆರೋಗ್ಯ ಇಲಾಖೆ, ತಾಲ್ಲೂಕು ಕಚೇರಿ, ಕೃಷಿ ಇಲಾಖೆ, ಬ್ಯಾಂಕ್,ನೋಂದಣಿ ಕಚೇರಿ, ನಾಡಕಚೇರಿ, ವಿದ್ಯಾರ್ಥಿನಿಲಯ, ಶಿಕ್ಷಣ ಇಲಾಖೆ ಮೊದಲಾದ ಸರ್ಕಾರಿ ಕಚೇರಿಗಳಲ್ಲಿ ದುಡಿಯುವ ಹೊರಗುತ್ತಿಗೆ ನೌಕರರು ಈ ಸಮಾಲೋಚನಾ ಸಭೆಯಲ್ಲಿ ಭಾಗವಹಿಸುವಂತೆ ವಿನಂತಿಸಿಕೊಂಡರು. ಸಭೆಯಲ್ಲಿ ಹೋರಾಟ ಸಮಿತಿ ರಚಿಸುವ ಉದ್ದೇವೂ ಇದೆ ಎಂದು ಅವರು ತಿಳಿಸಿದರು.
ದಲಿತ್ ಸೇವಾ ಸಮಿತಿಯ ಜಿಲ್ಲಾ ಸಂಚಾಲಕ ಗೋಪಾಲ ನೇರಳಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಿಟ್ಲ, ಗುತ್ತಿಗೆ ನೌಕರ ಉದಯ ಕುಮಾರ್ ವಿಟ್ಲ ಹಾಗೂ ದಲಿತ್ ಸೇವಾ ಸಮಿತಿ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ರಾಜು ಹೊಸ್ಮಠ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.