×
Ad

ಸದಸ್ಯತ್ವ ಅನರ್ಹಗೊಳ್ಳುವ ತನಕ ಹೋರಾಟ-ರುಕ್ಷಯ್ಯ ಗೌಡ

Update: 2017-07-24 20:24 IST

ಪುತ್ತೂರು, ಜು. 24: : ಪುತ್ತೂರು ತಾಲೂಕಿನ ಕಾಣಿಯೂರು ಮತ್ತು ದೋಳ್ಪಾಡಿ ಗ್ರಾಮಗಳನ್ನೊಳಗೊಂಡ ಕಾಣಿಯೂರು ಗ್ರಾಮ ಪಂಚಾಯತ್‌ನಲ್ಲಿ ನಡೆಯುತ್ತಿರುವ ಅವ್ಯವಹಾರ, ಅಧಿಕಾರ ದುರುಪಯೋಗ ಮತ್ತು ಕರ್ತವ್ಯ ಲೋಪಕ್ಕೆ ಸಂಬಂಧಿಸಿ ಈಗಾಗಲೇ ಸುಮಾರು 6 ಪ್ರಕರಣಗಳು ದಾಖಲಾಗಿ ವಿಚಾರಣಾ ಹಂತದಲ್ಲಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸದಸ್ಯತ್ವ ಅನರ್ಹ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಜಾಗೊಳಿಸುವ ತನಕ ಹೋರಾಟ ಮುಂದುವರಿಸುತ್ತೇನೆ ಎಂದು ಕಾಣಿಯೂರು ಗ್ರಾಮದ ಮರಕೆರ್ಚಿ ನಿವಾಸಿ ರುಕ್ಮಯ್ಯ ಗೌಡ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಣಿಯೂರು ಗ್ರಾಮ ಪಂಚಾಯತ್‌ನಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿ ಜಿಲ್ಲಾ ಪಂಚಾಯತಿನಲ್ಲಿ ಕಳೆದ ಜು.15ರಂದು ನಡೆದ ತನಿಖೆಯಲ್ಲಿ ಭಾಗವಹಿಸಿ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ ಲೋಪ ಮತ್ತು ಅಧಿಕಾರ ದುರುಪಯೋಗಕ್ಕೆ ಸಂಬಂಧ ಪಟ್ಟು ಅಧಿಕಾರಿಗಳ ಮುಂದೆ ಸಾಕ್ಷಿ ನುಡಿದಿದ್ದೇನೆ. ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ ಅವರ ಪತಿ ಲಕ್ಷಣ ಗೌಡ ಅವರು ಪೈಕದ ಮಲೆ ಮೀಸಲು ಅರಣ್ಯದಲ್ಲಿ ಪಂಚಾಯತ್ ಅನುಮತಿ ಪಡೆಯದೆ ನಿರ್ಮಿಸಿದ ಆರ್‌ಸಿಸಿ ಮನೆ, ರೈಲ್ವೇ ಜಮೀನಿಲ್ಲಿ ಪುಣ್ಚತ್ತಾರು ಬೆದ್ರಂಗಳ ಕಾರ್ಯ ಮರಕೆರ್ಜಿಗೆ ಹೋಗುವ ರಸ್ತೆಯನ್ನು ಪಂಚಾಯತ್ ರಸ್ತೆ ಎಂದು ಬಿಂಬಿಸಿ ಸರ್ಕಾರ ಹಣ ದುರುಪಯೋಗ ಪಡಿಸಿರುವುದು ಮತ್ತು ಅರಣ್ಯ ಬಫರ್ ಸ್ಥಳದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಮನೆ ನಿರ್ಮಿಸಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಹಕರಿಸಿದ ಪ್ರಕರಣಗಳು ಲೋಕಾಯುಕ್ತ ತನಿಖೆಯಲ್ಲಿದೆ ಎಂದವರು ಹೇಳಿದರು.

ಈ ಮೂರು ಪ್ರಕರಣಗಳಿಗೆ ಸಂಬಂಧಿಸಿ ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪಂಚಾಯತ್‌ಗೆ ಭೇಟಿ ನೀಡಿ ಹಗರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದ್ವೇಷದಿಂದ ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಮತ್ತು ಸದಸ್ಯರು ತನ್ನ ಸ್ವಾಧೀನ ಮತ್ತು ಅನುಭೋಗದ ಕೊಳವೆಬಾವಿ ಪಂಪನ್ನು ದರೋಡೆ ಮಾಡಿ ದೌರ್ಜನ್ಯವೆಸಗಿದ್ದಾರೆ. ಈ ಬಗ್ಗೆ ತನ್ನ ಪತ್ನಿ ವಿಶಾಲಾಕ್ಷಿ ಅವರು ಬೆಳ್ಳಾರೆ ಠಾಣೆಗೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕೊಳವೆ ಬಾವಿಯನ್ನು ವಶಪಡಿಸಿಕೊಂಡ ಪ್ರಕರಣವು ಪುತ್ತೂರು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ತಿಳಿಸಿದರು.

ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೀತಮ್ಮ ಖಂಡಿಗ ಹಾಗೂ ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ ಅವರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ತಮ್ಮ ವಿದ್ಯಾಭ್ಯಾಸದ ಕುರಿತು ಸುಳ್ಳು ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿ ಚುನಾವಣಾ ಆಯೋಗವನ್ನೇ ಕತ್ತಲಲ್ಲಿಟ್ಟಿದ್ದಾರೆ ಎಂದುರುಕ್ಮಯ್ಯ ಗೌಡ ಹೇಳಿದರು.

ಅಧ್ಯಕ್ಷೆ ಸೀತಮ್ಮ ಖಂಡಿಗ ಅವರು ಎಸೆಸೆಲ್ಸಿ ಉತ್ತೀರ್ಣ ಎಂದು ತಮ್ಮ ಪ್ರಮಾಣ ಪತ್ರದಲ್ಲಿ ವಿದ್ಯಾರ್ಹತೆ ಷೋಷಣೆ ಮಾಡಿದ್ದಾರೆ. ಆದರೆ ಅವರು ವಿದ್ಯಾಭ್ಯಾಸ ಮಾಡಿದ ಶಾಲೆಯಲ್ಲಿ ಆ ಬಗ್ಗೆ ಯಾವುದೇ ದಾಖಲೆ ಇಲ್ಲ. ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ ಅವರು ಪ್ರಮಾಣ ಪತ್ರದಲ್ಲಿ ವಿದ್ಯಾರ್ಹತೆ ಎಸೆಸೆಲ್ಸಿ ಎಂದು ಷೋಷಣೆ ಮಾಡಿದ್ದರೂ ಅವರು ಎಸೆಸೆಲ್ಸಿಯಲ್ಲಿ ಅನುತ್ತೀರ್ಣವಾಗಿರುವ ಬಗ್ಗೆ ದಾಖಲೆ ಲಭಿಸಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿದ್ಯಾಭ್ಯಾಸದ ಮಾನದಂಡ ಇಲ್ಲದಿದ್ದರೂ ಈ ಇಬ್ಬರು ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿರುವುದು ಮಾಹಿತಿ ಹಕ್ಕಿನಿಂದ ದೃಢಪಟ್ಟಿದೆ. ಈ ಬಗ್ಗೆಯೂ ಹೋರಾಟ ಮುಂದುರಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News