ಜು.30: ಜೋಕಟ್ಟೆಯಲ್ಲಿ ಉಚಿತ ಸಾಮೂಹಿಕ ವಿವಾಹ
ಮಂಗಳೂರು, ಜು. 24: ಜೋಕಟ್ಟೆ ಏರಿಯಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ (ಜೆಎಎಂಡಬ್ಲುಎ) ಗಲ್ಫ್ ಘಟಕ ಮತ್ತು ಅಂಜುಮಾನ್ ಖುವ್ವತುಲ್ ಇಸ್ಲಾಂ ಜೋಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಐದು ಬಡ ಹೆಣ್ಣು ಮಕ್ಕಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಜು.30ರಂದು ಬೆಳಗ್ಗೆ 9:30ಕ್ಕೆ ಜೋಕಟ್ಟೆಯ ಅಂಜುಮಾನ್ ಶಾಲಾ ವಠಾರದಲ್ಲಿ ಜರಗಲಿದೆ ಎಂದು ಜಾಮ್ವಾದ ದಮಾಂ - ಜುಬೈಲ್ ಘಟಕದ ಅಧ್ಯಕ್ಷ ಅಬ್ದುಲ್ ರಹ್ಮಾನ್ ತಿಳಿಸಿದ್ದಾರೆ.
ಸಮಸ್ತ ಮುಶಾವರದ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ದುವಾ ನೆರವೇರಿಸಲಿದ್ದಾರೆ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್ ನೇತೃತ್ವವನ್ನು ವಹಿಸಲಿದ್ದಾರೆ. ಜಾಮ್ವಾದ ಗೌರವಾಧ್ಯಕ್ಷ ಬಿ.ಝಕರಿಯ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂಜುಮಾನ್‌ನ ಅಧ್ಯಕ್ಷ ಬಿ.ಎ.ರಶೀದ್, ಜೋಕಟ್ಟೆಯ ಮುಹಿಯುದ್ದೀನ್ ಹಳೆ ಜುಮಾ ಮಸೀದಿಯ ಖತೀಬ್ ಇಸ್ಹಾಖ್ ಫೈಝಿ, ಜೋಕಟ್ಟೆಯ ಮುಹಿಯುದ್ದೀನ್ ಹೊಸ ಜುಮಾ ಮಸೀದಿಯ ಖತೀಬ್ ಇ.ಎಂ.ಅಬ್ದುರ್ರಹ್ಮಾನ್ ದಾರಿಮಿ ಅಲ್ ಹಾಮಿದಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಜಾಮ್ವಾ ಇದು ಜೋಕಟ್ಟೆ ಆಸುಪಾಸಿನ ಬಡ ಮತ್ತು ನಿರ್ಗತಿಕರ ಪಾಲಿನ ಆಶಾಕಿರಣ. 2004 ರಲ್ಲಿ ಜೋಕಟ್ಟೆಯ ಅನಿವಾಸಿ ಸಮಾನಮನಸ್ಕರಿಂದ ಬಡಜನರ ಸಾಂತ್ವನಕ್ಕಾಗಿ ಅವರ ಆರ್ಥಿಕ, ಶೈಕ್ಷಣಿಕ ಮತ್ತು ವೈದ್ಯಕೀಯ ನೆರವಿನ ಗುರಿಯೊಂದಿಗೆ ಮತ್ತು ಊರಿನ ಶ್ರೇಯಾಭಿವೃದ್ಧಿಗಾಗಿ ಸ್ಥಾಪಿಸಲ್ಪಟ್ಟ ಜೆಎಎಂಡಬ್ಲುಎ ಇಂದು ಗಲ್ಫ್ ರಾಷ್ಟ್ರಗಳಲ್ಲಿರುವ ಜೋಕಟ್ಟೆಯ ಅನಿವಾಸಿಗಳ ಸ್ವಾರ್ಥ ರಹಿತ ಸೇವೆಯಿಂದಾಗಿ ಯಶಸ್ಸಿನ 12 ವರ್ಷಗಳನ್ನು ಪೂರ್ತಿಗೊಳಿಸಿ 13ನೆ ವರ್ಷಕ್ಕೆ ಕಾಲಿಡುತ್ತಿದೆ.
ಜಾಮ್ವಾದ ಗೌರವಾಧ್ಯಕ್ಷರಾಗಿರುವ ಮುಝೈನ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿರುವ ಝಕರಿಯ್ಯೆ ಜೋಕಟ್ಟೆ ಅವರು ಜಾಮ್ವಾದ ಕಾರ್ಯಗಳಲ್ಲಿ ನಿರಂತರ ಮಾರ್ಗದರ್ಶನಗೈಯ್ಯುತ್ತಿದ್ದು, ಸಂಘದ ದ್ಯೇಯೋದ್ದೇಶಗಳ ಗುರಿ ಸಾಧನೆಗೆ ಇತರ ಸದಸ್ಯರೊಂದಿಗೆ ಸೇರಿಕೊಂಡು ಶ್ರಮಿಸುತ್ತಿದ್ದಾರೆ. ಕಳೆದ ಬಾರಿ ಜೋಕಟ್ಟೆ ಆಸುಪಾಸಿನ ಪರಿಸರದ ಐದು ಬಡ ಹೆಣ್ಣುಮಕ್ಕಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿತ್ತು. ಅಂಜುಮಾನ್ ಖುವ್ವತುಲ್ ಇಸ್ಲಾಂ ಸಂಸ್ಥೆಯು ಇವರೊಂದಿಗೆ ಸಂಪೂರ್ಣವಾಗಿ ಕೈಜೋಡಿಸಿದೆ ಎಂದು ಅಬ್ದುಲ್ ರಹ್ಮಾನ್ ಮತ್ತು ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಬಿ.ಎ.ರಶೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಾಮ್ವಾದ ಈವರೆಗಿನ ಸಾಮಾಜಿಕ ಸೇವೆ 2016 ರಲ್ಲಿ ಜೋಕಟ್ಟೆ ಆಸುಪಾಸಿನ ಐದು ಬಡ ಹೆಣ್ಣುಮಕ್ಕಳ ಉಚಿತ ಸಾಮೂಹಿಕ ಮದುವೆ ನಿರ್ವಹಣೆ. ಅಂಜುಮಾನ್ ಶೈಕ್ಷಣಿಕ ಸಂಸ್ಥೆಗೆ ಜಮೀನು ಖರೀದಿಗೆ ಸುಮಾರು 30 ಲಕ್ಷ ಧನ ಸಹಾಯ. 8ರಿಂದ 12ನೆಯ ತರಗತಿಯ ವಿದ್ಯಾರ್ಥಿಗಳಿಗೆ ರೂ 2,50,000 ವಾರ್ಷಿಕ ವಿದ್ಯಾರ್ಥಿ ವೇತನ. ಬಡ ಹೆಣ್ಮಕ್ಕಳ ವಿವಾಹಕ್ಕೆ 50,000 ರೂ. ನೆರವು. ಸುಮಾರು 25 ಬಡ ಕುಟುಂಬಗಳಿಗೆ ಸುಮಾರು 12.5 ಲಕ್ಷ ರೂ. ವಿತರಣೆ. ವಾರ್ಷಿಕ ಕನಿಷ್ಠ 20 ಬಡ ಕುಟುಂಬಗಳಿಗೆ ತಲಾ 1000 ರೂ. ಮೌಲ್ಯದ ಮಾಸಿಕ ಪಡಿತರ ವಿತರಣೆ. ವಾರ್ಷಿಕ ಕನಿಷ್ಠ 200 ಕುಟುಂಬಗಳಿಗೆ ತಲಾ 3000 ರೂ. ಮೌಲ್ಯದ ರಮಝಾನ್ ಕಿಟ್ ವಿತರಣೆ. ವಾರ್ಷಿಕ ಕನಿಷ್ಠ 400 ಕುಟುಂಬಗಳಿಗೆ ವೈದ್ಯಕೀಯ ಶಿಬಿರಗಳನ್ನು ನಡೆಸುವ ವ್ಯವಸ್ಥೆ.