ಜಾಗೃತಿ ಮೂಡಿಸುವ ಸಾಮಾಜಿಕ ಯಕ್ಷಗಾನ ಪ್ರದರ್ಶನ
ಉಡುಪಿ, ಜು.24: ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಉಡುಪಿ ನೆಹರು ಯುವ ಕೇಂದ್ರ, ಬೆಂಗಳೂರು ಯಕ್ಷ ದೇಗುಲ, ಕೇಂದ್ರ ಸರಕಾರದ ಗೀತೆ ಮತ್ತು ನಾಟಕ ವಿಭಾಗ ಹಾಗೂ ಕುಂದಾ ಪುರ ಜೆಸಿಐ ಚರಿಷ್ಮಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಅನಕ್ಷರತೆಯ ಪರಿಣಾಮ, ಯೋಗ ಹಾಗೂ ಸ್ವಚ್ಛ ಭಾರತದ ಕುರಿತ ಜಾಗೃತಿ ಮೂಡಿಸುವ ಸಾಮಾಜಿಕ ಯಕ್ಷಗಾನ ಪ್ರದರ್ಶನವನ್ನು ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಸಭಾ ಕಾರ್ಯಕ್ರಮದಲ್ಲಿ ಯಕ್ಷ ದೇಗುಲದ ಲಂಭೋದರ ಹೆಗಡೆ ಮಾತ ನಾಡಿ, ಕಲೆಯು ಜನಜಾಗೃತಿ ಮೂಡಿಸಲು ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮ. ಯಕ್ಷಗಾನವು ಕರಾವಳಿ ಕರ್ನಾಟಕದ ಅತ್ಯಂತ ಶ್ರೀಮಂತ ಕಲೆ ಯಾಗಿದ್ದು ಈ ಮೂಲಕ ಸಾಂಪ್ರದಾಯಿಕ ಶೈಲಿಯಲ್ಲಿ ಜಾಗೃತಿ ಮೂಡಿಸುವ ಒಂದು ಪ್ರಯೋಗ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಸುಕನ್ಯಾ ಮೇರಿ ಜೆ. ವಹಿಸಿ ದ್ದರು. ಘಟಕ 2ರ ಯೋಜನಾಧಿಕಾರಿ ಮಲ್ಲಿಕಾ, ಯಕ್ಷ ದೇಗುಲದ ನಿರ್ದೇಶಕ ಸುದರ್ಶನ ಉರಾಳ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ರಮಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಇಳಿಯಣ್ಣನ ಕಥೆ’ ಎಂಬ ಸಾಮಾಜಿಕ ಜಾಗೃತಿ ಮೂಡಿಸುವ ಯಕ್ಷ ಪ್ರಸಂಗವು ಜರಗಿತು.