×
Ad

ಕೇವಲ ಒಂದು ವರ್ಷದ ಚಿಕಿತ್ಸೆಯಿಂದ ಏಡ್ಸ್‌ನಿಂದ ಗುಣಮುಖವಾದ ಮಗು!

Update: 2017-07-24 22:00 IST

ಪ್ಯಾರಿಸ್,ಜು.24: ಎಚ್‌ಐವಿ ಸೋಂಕಿನೊಂದಿಗೆ ಜನಿಸಿದ ದಕ್ಷಿಣ ಆಫ್ರಿಕದ ಮಗುವೊಂದು ಎಂಟೂವರೆ ವರ್ಷಗಳವರೆಗೆ ಯಾವುದೇ ಚಿಕಿತ್ಸೆಯಿಲ್ಲದೆ, ಆನಂತರ ಕೇವಲ ಒಂದೇ ವರ್ಷದ ಶುಶ್ರೂಷೆಯ ಬಳಿಕ ಏಡ್ಸ್‌ನಿಂದ ಗುಣಮುಖಳಾಗುವ ಮೂಲಕ ತಜ್ಞರನ್ನು ಅಚ್ಚರಿಗೊಳಿಸಿದ್ದಾಳೆ.

   ಏಡ್ಸ್ ರೋಗವನ್ನು ನಿಯಂತ್ರಣದಲ್ಲಿರಿಸಲು ಎಚ್‌ಐವಿ ಪೀಡಿತ ರೋಗಿಗಳು ಸಾಮಾನ್ಯವಾಗಿ ಜೀವಮಾನವಿಡೀ ಆ್ಯಂಟಿರಿಟ್ರೊವೈರಲ್ (ಎಆರ್‌ಟಿ) ಔಷಧಿಗಳನ್ನು ಅವಲಂಭಿಸಬೇಕಾಗುತ್ತದೆ.

ಆದರೆ ದಕ್ಷಿಣ ಆಫ್ರಿಕದ ಈ ಹತ್ತು ವರ್ಷದ ಮಗುವು ಕೇವಲ ಒಂದು ವರ್ಷದ ಚಿಕಿತ್ಸೆಯ ಬಳಿಕ ಸಂಪೂರ್ಣವಾಗಿ ಏಡ್ಸ್‌ನಿಂದ ಮುಕ್ತಳಾಗಿದ್ದಾಳೆ. ಮಗುವು ಏಡ್ಸ್‌ನಿಂದ ಗುಣಮುಖಗೊಂಡ ವಿದ್ಯಮಾನವು ಜಗತ್ತಿನಾದ್ಯಂತ ಈ ಮಾರಣಾಂತಿಕ ರೋಗದ ಸೋಂಕಿಗೊಳಗಾಗಿರುವ 37 ಲಕ್ಷ ಮಂದಿಯ ಬದುಕಿಗೆ ಹೊಸ ಭರವಸೆಯನ್ನು ನೀಡಿದೆಯೆಂದು ಎಚ್‌ಐವಿ ತಜ್ಞರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಮಗುವು ಏಡ್ಸ್ ಪೀಡಿತ ತಾಯಿಗೆ ಜನಿಸಿದ್ದು, ಹುಟ್ಟುವಾಗಲೇ ಎಚ್‌ಐವಿ ಸೋಂಕಿಗೊಳಗಾಗಿತ್ತು ಎಂದು ತಜ್ಞರು ತಿಳಿಸಿದ್ದಾರೆ.

 ಆದಾಗ್ಯೂ ಈ ಪ್ರಕರಣವು ಅತ್ಯಂತ ಅಪರೂಪದ್ದಾಗಿದ್ದು, ಎಲ್ಲರಿಗೂ ಇದೇ ರೀತಿಯಾಗಿ ಏಡ್ಸ್‌ನಿಂದ ಗುಣಮುಖರಾಗಲು ಸಾಧ್ಯವಿದೆಯೆಂದು ಹೇಳಲಾಗದು ಎಂದವರು ಎಚ್ಚರಿಕೆ ನೀಡಿದ್ದಾರೆ.

 ಏಡ್ಸ್ ರೋಗಕ್ಕೆ ಶಾಶ್ವತವಾಗಿ ಚಿಕಿತ್ಸೆಯ ಅಗತ್ಯವಿಲ್ಲವೆಂಬ ಅಭಿಪ್ರಾಯವನ್ನು ಈ ಪ್ರಕರಣವು ಹುಟ್ಟುಹಾಕಿದೆ ಎಂದು ಅಂತಾರಾಷ್ಟ್ರೀಯ ಏಡ್ಸ್ ಸೊಸೈಟಿಯ ಅಧ್ಯಕ್ಷೆ ಲಿಂಡಾ ಗೆಯಿಲ್ ಬೆಕರ್ ತಿಳಿಸಿದ್ದಾರೆ.

ಏಡ್ಸ್‌ನಿಂದ ಗುಣಮುಖಳಾದ ಮಗುವಿನ ಹೆಸರು ಹಾಗೂ ಲಿಂಗವನ್ನು ಈವರೆಗೆ ಬಹಿರಂಗಪಡಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News