ಒಂದೇ ಓವರ್‌ನಲ್ಲಿ ಆರು ಸಿಕ್ಸರ್: ಯುವರಾಜ್ ಸಾಧನೆ ನೆನಪಿಸಿದ ರೋಸ್ ವೈಟ್ಲಿ

Update: 2017-07-25 09:08 GMT

ಲಂಡನ್, ಜು.25: ವಾರ್ವಿಕ್‌ಶೈರ್ ಬ್ಯಾಟ್ಸ್‌ಮನ್ ರೋಸ್ ವೈಟ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ ಸಾಧಕರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಹೆಡ್ಡಿಂಗ್ಲೆಯಲ್ಲಿ ರವಿವಾರ ನಡೆದಿದ್ದ ಇಂಗ್ಲಿಷ್ ಕೌಂಟಿ ಟ್ವೆಂಟಿ-20 ಪಂದ್ಯದಲ್ಲಿ ರೋಸ್ ಈ ಸಾಧನೆ ಮಾಡಿದ್ದಾರೆ.
ಎಡಗೈ ಬ್ಯಾಟ್ಸ್‌ಮನ್ ರೋಸ್ ಯಾರ್ಕ್‌ಶೈರ್‌ನ ಎಡಗೈ ಸ್ಪಿನ್ನರ್ ಕಾರ್ಲ್ ಕಾರ್ವೆರ್ ಎಸೆದ ಇನಿಂಗ್ಸ್‌ನ 16ನೆ ಓವರ್‌ನ ಎಲ್ಲ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದರು.
ರೋಸ್ 26 ಎಸೆತಗಳಲ್ಲಿ 65 ರನ್ ಗಳಿಸಿದ್ದರೂ ವಾರ್ವಿಕ್‌ಶೈರ್ ತಂಡ 7 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ ಯಾರ್ಕ್‌ಶೈರ್ ವಿರುದ್ಧ 37 ರನ್‌ಗಳಿಂದ ಸೋಲುಂಡಿತ್ತು.
ವೆಸ್ಟ್‌ಇಂಡೀಸ್‌ನ ಕ್ರಿಕೆಟ್ ದಿಗ್ಗಜ ಗ್ಯಾರಿ ಸೋಬರ್ಸ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಓವರ್‌ವೊಂದರಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಆಟಗಾರನಾಗಿದ್ದಾರೆ. 1968ರಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸೊಬರ್ಸ್ ಈ ಸಾಧನೆ ಮಾಡಿದ್ದರು.
ಆನಂತರ ಭಾರತದ ರವಿ ಶಾಸ್ತ್ರಿ, ದಕ್ಷಿಣ ಆಫ್ರಿಕದ ಹರ್ಷಲ್ ಗಿಲ್ಸ್ ಹಾಗೂ ಯುವರಾಜ್ ಸಿಂಗ್ ಕ್ರಮವಾಗಿ ಪ್ರಥಮದರ್ಜೆ, ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News