×
Ad

ಜು. 26ರಿಂದ ಮನಪಾ- ಟ್ರಾಫಿಕ್‌ನವರಿಂದ ಜಂಟಿ ಸಮೀಕ್ಷೆ: ಮೇಯರ್

Update: 2017-07-25 14:52 IST

ಮಂಗಳೂರು, ಜು.25: ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಲು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರ ತಂಡವು ಜುಲೈ 26ರಿಂದ ಜಂಟಿ ಸಮೀಕ್ಷೆಯನ್ನು ಆರಂಭಿಸಲಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.

ಮನಪಾದ ಮೇಯರ್ ಕೊಠಡಿಯಲ್ಲಿಂದು ಫೋನ್ ಇನ್ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರ ದೂರಿಗೆ ಪ್ರತಿಕ್ರಿಯಿಸುತ್ತಾ ಮೇಯ್ ಕವಿತಾ ಸನಿಲ್ ಈ ವಿಷಯ ತಿಳಿಸಿದರು.

ನಗರದ ರಸ್ತೆಯ ಇಕ್ಕೆಲಗಳಲ್ಲಿ, ಪುಟ್‌ಪಾತ್‌ಗಳಲ್ಲಿ ಅನಧಿಕೃತ ಗೂಡಂಗಡಿಗಳು, ಮೊಬೈಲ್ ಕ್ಯಾಂಟೀನ್ ಗಳು, ಅನಧಿಕೃತ ಪಾರ್ಕಿಂಗ್‌ನಿಂದಾಗಿ ನಗರದ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಪಿವಿಎಸ್‌ನಿಂದ ಸ್ಟೇಟ್‌ಬ್ಯಾಂಕ್‌ವರೆಗಿನ ರಸ್ತೆಗಳ ಜಂಟಿ ಸಮೀಕ್ಷೆ ನಡೆಯಲಿದೆ. ಬಳಿಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಪಂಪ್‌ವೆಲ್‌ನ ನಿವಾಸಿ ನಳಿನಿ ಎಂಬವರು ದೂರವಾಣಿ ಮೂಲಕ, ಕಪಿತಾನಿಯೊ ಶಾಲೆ ಬಳಿ ಮೊಬೈಲ್ ಕ್ಯಾಂಟೀನ್ ನಿಂದಾಗಿ ಅಕ್ಕಪಕ್ಕ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗುತ್ತಿರುವುದಾಗಿ ದೂರಿದರು.

ಫುಟ್‌ಪಾತ್ ಮೇಲೆ ದ್ವಿಚಕ್ರ ವಾಹನ ಚಾಲನೆ!
ಲೈಟ್‌ಹೌಸ್ ಹಿಲ್ ರಸ್ತೆಯಲ್ಲಿ ಪದೇ ಪದೇ ಟ್ರಾಫಿಕ್ ಜಾಮ್ ಆಗುತ್ತಿದ್ದು, ಯುವಕರು ಅಲ್ಲಿನ ಫುಟ್‌ಪಾತ್ ಮೇಲಿನಿಂದಲೇ ದ್ವಿಚಕ್ರ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಿರುತ್ತಾರೆ ಎಂದು ಡಾ. ಅರುಣ್ ರಾವ್ ಎಂಬವರು ದೂರವಾಣಿ ಮೂಲಕ ದೂರು ನೀಡಿದರು.

ಗಣಪತಿ ಹೈಸ್ಕೂಲ್ ಎದುರು ಹಂಪ್ಸ್‌ಗೆ ಆಗ್ರಹ
ಗಣಪತಿ ಹೈಸ್ಕೂಲ್‌ನ ಎದುರು ವಾಹನ ದಟ್ಟನೆ ಅಧಿಕವಾಗಿರುವ ಕಾರಣ ಅಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಬಿಡುವ ಹಾಗೂ ಪ್ರವೇಶಿಸುವ ಸಂದರ್ಭ ರಸ್ತೆ ದಾಟಲು ಸಮಸ್ಯೆಯಾಗುತ್ತಿದೆ. ಅಲ್ಲಿ ಹಂಪ್ಸ್ ಹಾಕಬೇಕು ಹಾಗೂ ಹಾಳಾಗಿರುವ ಫುಟ್‌ಪಾತ್ ದುರಸ್ತಿ ಮಾಡಬೇಕು ಎಂದು ಮಹೇಶ್ ಎಂಬವರು ಆಗ್ರಹಿಸಿದರು.

ಮನವಿ ಸಲ್ಲಿಸಿದ್ದರೂ ರಸ್ತೆಯಾಗಿಲ್ಲ!
ಕುಳಾಯಿಯ ಚಿತ್ರಾಪುರ ಬೈಲಾರೆ ಪ್ರದೇಶದಲ್ಲಿ ಸುಮಾರು 70 ಮನೆಗಳಿವೆ. 25 ವರ್ಷಗಳಿಂದ ಅಲ್ಲಿ ರಸ್ತೆಗಾಗಿ ಮನವಿ ಸಲ್ಲಿಸುತ್ತಿದ್ದರೂ ರಸ್ತೆ ಮಾತ್ರ ಆಗಿಲ್ಲ ಎಂದು ದಿನೇಶ್ ಕುವಾರ್ ಕುಳಾಯಿ ಎಂಬವರು ದೂರಿದರು.

ಡ್ರೈನೇಜ್ ನೀರು ಮುಖ್ಯ ರಸ್ತೆಯಲ್ಲಿ!
ಕದ್ರಿ ಕಂಬಳದ ಬಳಿ ಡ್ರೈನೇಜ್ ನೀರು ಮುಖ್ಯ ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಪ್ರಶಾಂತ್ ಎಂಬವರು ಆಕ್ಷೇಪಿಸಿದರು.
ಮೇಯರ್ ಕವಿತಾ ಸನಿಲ್ ಪ್ರತಿಕ್ರಿಯಿಸಿ, ದ್ವಿತೀಯ ಹಂತದ ಎಡಿಬಿ ಕಾಮಗಾರಿಯಲ್ಲಿ ಈ ವ್ಯವಸ್ಥೆ ಸರಿಯಾಗಲಿದೆ. ಕೆಲವೊಂದು ಕಡೆ ಒಳಚರಂಡಿ ಸಂಪರ್ಕ ಮಿಸ್ ಆಗಿರುವ ಕಾಣ ಈ ಸಮಸ್ಯೆ ಆಗುತ್ತಿದೆ ಎಂದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ನಗರದ ಧನ್ವಂತರಿಯಿಂದ ಮಹಾಮಾಯಿ ದೇವಸ್ಥಾನದವರೆಗೆ ರಸ್ತೆ, ಪಡೀಲು ಜಂಕ್ಷನ್ ಬಳಿ ವಾಹನದಟ್ಟನೆ, ಲೋವರ್ ಬೆಂದೂರ್‌ವೆಲ್ ಬಳಿ ಸಾರ್ವಜನಿಕ ರಸ್ತೆ ಅತಿಕ್ರಮಣ, ವಾಮಂಜೂರಿನಲ್ಲಿ ಜನವಸತಿ ಇರುವಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಕಾರ್ಯಾಚರಣೆ ಮೊದಲಾದ ದೂರುಗಳು ಮೇಯರ್‌ರವರಿಗೆ ಸಾರ್ವಜನಿಕರಿಂದ ವ್ಯಕ್ತವಾಯಿತು.

ಒಂದು ಗಂಟೆ ಅವಧಿಯಲ್ಲಿ 25ಕ್ಕೂ ಅಧಿಕ ದೂರವಾಣಿ ಕರೆಗಳನ್ನು ಸ್ವೀಕರಿಸಿದ ಮೇಯರ್ ಕವಿತಾ ಸನಿಲ್‌ರವರು ಸಾರ್ವಜನಿಕರಿಗೆ ಸಮಸ್ಯೆ ಬಗೆಹರಿಸುವ ಆಶ್ವಾಸನೆಯನ್ನು ನೀಡಿದರು. ಕಳೆದ ಫೋನ್‌ಇನ್ ಕಾರ್ಯಕ್ರಮದಲ್ಲಿ ವ್ಯಕ್ತವಾದ ಸಮಸ್ಯೆ ದೂರುಗಳನ್ನು ಬಗೆಹರಿಸಿರುವುದಾಗಿಯೂ ಈ ಸಂದಭರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಮೇಯರ್ ರಜನೀಶ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಬಿತಾ ಮಿಸ್ಕಿತ್, ಅಬ್ದುಲ್ ರವೂಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News