×
Ad

ಪಡುಬಿದ್ರೆ: ಮೆಸ್ಕಾಂ ವಿರುದ್ಧ ಧರಣಿ

Update: 2017-07-25 15:17 IST

ಪಡುಬಿದ್ರೆ, ಜು. 25: ಅನಿಯಮತಿ ವಿದ್ಯುತ್ ಕಡಿತಗೊಳಿಸುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಹೆಜಮಾಡಿಯ ನಾಗರಿಕ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಮೆಸ್ಕಾಂ ಕಚೇರಿ ಎದುರು ಧರಣಿ ನಡೆಯಿತು.

12 ಸಾವಿರ ಜನಸಂಖ್ಯೆ ಇರುವ ಹೆಜಮಾಡಿಯಲ್ಲಿ ಸಣ್ಣ ಕೈಗಾರಿಕೆಗಳು, ಮೀನುಗಾರಿಕಾ ಬಂದರು, ಹೆಂಚು ಕಾರ್ಖಾನೆ, ಮರದ ಮಿಲ್ಲುಗಳು, ಬ್ಯಾಂಕು ಗಳು, ಶೈಕ್ಷಣಿಕ ಕೇಂದ್ರಗಳಿವೆ. ಹೆಜಮಾಡಿ ಗ್ರಾಮದಲ್ಲಿ ಹೆಚ್ಚು ಕಂದಾಯ ಮೆಸ್ಕಾಂಗೆ ಸಂದಾಯವಾಗುತ್ತಿದೆ. ಆದರೆ ಈ ಭಾಗದಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುವುದರಿಂದ ನಾಗರೀಕರು ಸಮಸ್ಯೆ ಅನುಭವಿಸುತಿದ್ದಾರೆ. ಈ ನಿಟ್ಟಿನಲ್ಲಿ ಕೂಡಲೇ ನಾಗರೀಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಕೂಡಲೇ ಪರಿಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೆಸ್ಕಾಂಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಮೆಸ್ಕಾಂ ಅಧಿಕಾರಿ ನರಸಿಂಹ, ಹಜಮಾಡಿ ಸಹಿತ ಪಡುಬಿದ್ರೆ ಮೆಸ್ಕಾಂ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲಾಗುವುದು ಎಂದರು. ಪ್ರಭಾರ ಶಾಖಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು.

ನಿರಂತರ ವಿದ್ಯುತ್ ನೀಡಿ: ಉಡುಪಿ ಜಿಲ್ಲೆಯ ಪಡುಬಿದ್ರೆ ವ್ಯಾಪ್ತಿಯ ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಒಡೆತನದ ಯುಪಿಸಿಎಲ್ ವಿದ್ಯುತ್ ಸ್ಥಾವರ ಇದೆ. ಆದರೆ ಈ ಭಾಗದ ಜನರಿಗೆ ನಿರಂತರ ವಿದ್ಯುತ್ ನೀಡುವುದಾಗಿ ಇಂಧನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹೇಳಿಕೆ ನೀಡುತ್ತಾರೆ. ಆದರೆ ಇದುವರೆಗೂ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತಿಲ್ಲ. ಕೂಡಲೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ನಿರಂತರ ವಿದ್ಯುತ್ ನೀಡಬೇಕು ಎಂದು ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಶೇಖರ್ ಹೆಜಮಾಡಿ ಆಗ್ರಹಿಸಿದರು.

ಬೇಡಿಕೆಗಳು: ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು, ಹೈಟೆನ್ಶನ್ ತಂತಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಹೆಜಮಾಡಿ ಗ್ರಾಮಕ್ಕೆ ಮುಲ್ಕಿ ಫೀಡರ್‌ನಿಂದ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು. ನಂದಿಕೂರು ಫೀಡರ್‌ನಿಂದ ವಿದ್ಯುತ್ ಜೋಡಣೆಯಾಗಿದ್ದು, ಅದನ್ನು ಸಮಪರ್ಕಕವಾಗಿ ಮುಂದುವರಿಬೇಕು. ದಾರಿದೀಪಗಳು ಸರಿಯಾಗಿ ನಿರ್ವಹಣೆಯಾಗದಿರುವುದರಿಂದ ಹೊಸ ದಾರಿ ದೀಪಗಳನ್ನು ಮಂಜೂರು ಮಾಡಬೇಕು. ಹೆಜಮಾಡಿ-ಫಲಿಮಾರು ಒಳಗೊಂಡು ಹೆಜಮಾಡಿಯಲ್ಲಿ ಹೊಸ ಸೆಕ್ಷನ್ ಕಚೇರಿ ಆರಂಭಿಸಬೇಕು. ಪಡುಬಿದ್ರೆ ಮೆಸ್ಕಾಂಗೆ ಪೂರ್ಣಾವಧಿಯ ಸೆಕ್ಷನ್ ಅಧಿಕಾರಿಯನ್ನು ನೇಮಿಸಬೇಕು.

ಮನವಿ ಪ್ರತಿಯನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ವಿನಯಕುಮಾರ್ ಸೊರಕೆಯವರಿಗೆ ಕಳುಹಿಸಕೊಡಲಾಯಿತು. ಪ್ರತಿಭಟನೆಯ ಆರಂಭದಲ್ಲಿ ಹೆಜಮಾಡಿಯಿಂದ ಪಡುಬಿದ್ರೆಯವರೆಗೆ ವಾಹನ ಜಾಥಾ ನಡೆಸಿದರು. ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಶೇಖರ್ ಹೆಜಮಾಡಿ, ಕಾರ್ಯದರ್ಶಿ ಇಬ್ರಾಹಿಂ, ಎಚ್.ಸನಾ, ಗ್ರಾಪಂ ಸದಸ್ಯರಾದ ಮಯ್ಯದ್ದಿ ಕಣ್ಣಂಗಾರ್, ಹಸನ್ ಕಂಚಿನಡ್ಕ, ಸುಧಾಕರ ಕೆ, ಪಾಂಡುರಂಗ ಕರ್ಕೇರ, ವಸಂತ ಸುವರ್ಣ, ಎಚ್.ಸೂಫಿ, ಹಮ್ಮಬ್ಬ ಮುಹಿಯದ್ದೀನ್, ಅಶೋಕ್ ದೇವಾಡಿಗ, ಪ್ಮನಾಭ ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News