×
Ad

ಸ್ಕಿಲ್‌ಗೇಮ್‌ನ ಬಲೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು!

Update: 2017-07-25 16:51 IST

ಮಂಗಳೂರು, ಜು. 24: ನಗರದಲ್ಲಿ ರಿಕ್ರಿಯೇಶನ್ ಕ್ಲಬ್‌ಗಳ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಸ್ಕಿಲ್‌ಗೇಮ್ ಕ್ಲಬ್‌ಗಳಲ್ಲಿ ನಡೆಯುತ್ತಿರುವ ಜೂಜಾಟ ದಿಂದಾಗಿ ಹದಿಹರೆಯದ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಅಂದ ಹಾಗೆ, ಮಂಗಳೂರಿನ ಪ್ರಥಮ ಪ್ರಜೆಗೇ ಈ ಬಗ್ಗೆ ಹಲವಾರು ದೂರುಗಳು ಬಂದಿರುವುದು ಮಾತ್ರವಲ್ಲ, ಈ ಬಗ್ಗೆ ಅವರು ದಿಟ್ಟ ಹೋರಾಟಕ್ಕೂ ಮುಂದಾಗಿದ್ದಾರೆ.

ಸಾರ್ವಜನಿಕರ ದೂರಿನ ಮೇರೆಗೆ, ಬಲ್ಮಠ- ಪಳ್ನೀರ್ ಸಂಪರ್ಕ ರಸ್ತೆಯ ಬಳಿ ಇರುವ ಸ್ಕಿಲ್ ಗೇಮ್ ಕ್ಲಬ್‌ವೊಂದಕ್ಕೆ ಜುಲೈ 11ರಂದು ಮೇಯರ್ ಕವಿತಾ ಸನಿಲ್‌ರವರು, ಮನಪಾ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರ ತಂಡದೊಂದಿಗೆ ಹಠಾತ್ ದಾಳಿ ನಡೆಸಿ ಬೀಗ ಜಡಿದಿದ್ದರು. ತಮ್ಮ ಬಳಿ ಹೈಕೋರ್ಟ್ ಆದೇಶವಿದೆ ಎಂದೇ ಎಂದು ಮೇಯರ್ ಹಾಗೂ ಪೊಲೀಸರ ಎದುರು ವಾದಿಸಿದ್ದ ಕ್ಲಬ್‌ನವರು ಮಾರನೆ ದಿನವೇ ಆ ಕ್ಲಬ್ ತೆರೆದು ಕಾರ್ಯಾಚರಣೆ ಆರಂಭಿಸಿದ್ದಾರೆ. ಮಾತ್ರವಲ್ಲದೆ, ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಕ್ಲಬ್‌ನವರು ಮೇಯರ್, ಸ್ಥಳೀಯ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಮನಪಾ ಆರೋಗ್ಯ ಅಧಿಕಾರಿ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದಾರೆ.

‘‘ನಗರದಲ್ಲಿ ಸ್ಕಿಲ್ ಗೇಮ್ ಹೆಸರಿನಲ್ಲಿ ನಡೆಯುತ್ತಿರುವ ಜೂಜಾಟದಿಂದಾಗಿ ಹಲವು ಕುಟುಂಬಗಳು ಆರ್ಥಿಕವಾಗಿ ಬೀದಿಗೆ ಬಂದಿರುವ ಬಗ್ಗೆ ನನಗೆ ಪ್ರತಿನಿತ್ಯ ದೂರುಗಳು ಬರುತ್ತಿವೆ. ಆ ದೂರಿನ ಮೇರೆಗೆ ಮನಪಾ ದಿಟ್ಟ ಕ್ರಮವನ್ನು ಕೈಗೊಂಡಿದೆ. ರಿಕ್ರಿಯೇಶನ್ ಕ್ಲಬ್‌ಗಳಿಗೆ ಮನಪಾದಿಂದ ಪರವಾನಿಗೆ ನೀಡಲಾಗುತ್ತಿದೆ. ಅಲ್ಲಿ ಒಳಾಂಗಣ ಕ್ರೀಡೆಗಳು, ರಮ್ಮಿ, ಪೋಕರ್, ಚೆಸ್, ಕ್ಯಾರಂ, ಲೂಡಾ ಈ ಕ್ರೀಡೆಗಳಿಗೆ ಮಾತ್ರ ಅವಕಾಶವಿರುವುದು. ಯಾವುದೇ ರೀತಿಯಲ್ಲಿ ಹಣ ಇರಿಸಿ ಜೂಜಾಟ ಮಾಡುವಂತಿಲ್ಲ. ಆದರೆ ನಗರದಲ್ಲಿರುವ ಕೆಲವರು ಇಂತಹ ಕ್ರೀಡೆಗಳ ಹೆಸರಿನಲ್ಲಿ ನ್ಯಾಯಾಲದಿಂದಲೇ ಅನುಮತಿ ಪಡೆದುಕೊಂಡು ಜೂಜಾಟದಲ್ಲಿ ನಿರತರಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರ ಸಹಕಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಹೋರಾಟ ಮುಂದುವರಿಯಲಿದೆ’’ ಎಂದು ಮೇಯರ್ ಕವಿತಾ ಸನಿಲ್ ಪ್ರತಿಕ್ರಿಯಿಸಿದ್ದಾರೆ.

ರಿಕ್ರಿಯೇಶನ್ ಹೆಸರಿನಲ್ಲಿ ದಂಧೆ
ನಗರದಲ್ಲಿ ರಿಕ್ರಿಯೇಶನ್ ಹೆಸರಿನಲ್ಲಿ ಜೂಜಾಟದ ದಂಧೆ ಮೂಲಕ ಇಂತಹ ಕ್ಲಬ್‌ಗಳನ್ನು ನಡೆಸುವವರು ದಂಧೆ ಮಾಡುತ್ತಿದ್ದಾರೆ. ಹೆಚ್ಚು ಹಣ ಗಳಿಸುವ ಆಮಿಷಕ್ಕೆ ಯುವಜನರು ಈ ಸ್ಕಿಲ್‌ಗೇಮ್‌ನ ಬಲೆಯೊಳಗೆ ಸಿಲುಕುತ್ತಿದ್ದಾರೆ. ಅತ್ತ ಪರವಾನಿಗೆಯೂ ಇಲ್ಲ, ಇತ್ತ ಯಾರ ಹಿಡಿತವೂ ಇಲ್ಲದಿರುವುದರಿಂದ ಈ ಸ್ಕಿಲ್‌ಗೇಮ್‌ಗಳು ರಾಜಾರೋಷವಾಗಿ ಕಾರ್ಯನಿರ್ವಹಿಸುತ್ತಿವೆ.

‘ಬಲ್ಮಠ- ಪಳ್ನೀರ್ ಸಂಪರ್ಕ ರಸ್ತೆಯ ಬಳಿ ಇರುವ ಸ್ಕಿಲ್ ಗೇಮ್ ಕ್ಲಬ್‌ನವರು ಇದೀಗ ಮೇಯರ್, ಸರ್ಕಲ್ ಇನ್ಸ್‌ಪೆಕ್ಟರ್ ಬೆಳ್ಳಿಯಪ್ಪ ಹಾಗೂ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮನಪಾದಿಂದಲೂ ಕ್ಲಬ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಕಾನೂನು ಹೋರಾಟ ಮುಂದುವರಿಯಲಿದೆ’ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

17 ಮಸಾಜ್ ಪಾರ್ಲರ್‌ಗಳ ಪರವಾನಿಗೆ ರದ್ದು
ನಗರದಲ್ಲಿ ಆಯುವೇರ್ದಿಕ್ ತೆರಪಿ ಹೆಸರಿನಲ್ಲಿ ಮಸಾಜ್ ಪಾರ್ಲರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿಯೂ ಅಕ್ರಮ ವ್ಯವಹಾರಗಳು ನಡೆಯುತ್ತಿರುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ದಾಳಿ ನಡೆಸಲಾಗಿತ್ತು. ಇದೀಗ ನಗರದ 17 ಮಸಾಜ್ ಪಾರ್ಲರ್‌ಗಳಿಗೆ ನೋಟೀಸು ನೀಡಿ ಅವುಗಳ ಪರವಾನಿಗೆಯನ್ನು ರದ್ದುಪಡಿಸಲಾಗಿದೆ.

ಪರವಾನಿಗೆ ರದ್ದುಗೊಳಿಸಿಯೂ ತೆರೆದಿರುವ ಮಸಾಜ್ ಪಾರ್ಲರ್‌ಗಳನ್ನು ಬಂದ್ ಮಾಡಲಾಗಿದೆ ಎಂದು ಮನಪಾ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ತಿಳಿಸಿದ್ದಾರೆ.

ಸ್ಥಳೀಯ ಆರೋಗ್ಯ ಇನ್ಸ್‌ಪೆಕ್ಟರ್‌ಗಳ ಮೂಲಕ ಸ್ಕಿಲ್‌ಗೇಮ್‌ಗಳಿಗೆ ನೋಟೀಸು ನೀಡಲಾಗುವುದು. ಒಂದು ವಾರದಲ್ಲಿ ಈ ಕಾರ್ಯ ನಡೆಯಲಿದೆ. ನ್ಯಾಯಾಲಯದ ಆದೇಶದ ಪ್ರಕಾರ ರಿಕ್ರಿಯೇಶನ್ ಕ್ಲಬ್‌ನಲ್ಲಿ ನಡೆಸುವ ರಮ್ಮಿ, ಪೋಕರ್, ಚೆಸ್, ಕ್ಯಾರಂ ಮೊದಲಾದ ಆಟಗಳಿಗೆ ಮಾತ್ರವೇ ಅಲ್ಲಿ ಅವಕಾಶ ನೀಡಬೇಕು. ಈ ಬಗ್ಗೆ ಅಂತಹ ರಿಕ್ರಿಯೇಶನ್ ಕ್ಲಬ್‌ಗಳನ್ನು ನಡೆಸುವವರು ಅಫಿದಾವಿತ್ ಒದಗಿಸಬೇಕು. ಈ ಬಗ್ಗೆ ಕಾನೂನು ಸಲಹೆಯನ್ನು ಪಡೆದುಕೊಳ್ಳಲಾಗಿದೆ ಎಂದು ಮಂಜಯ್ಯ ಶೆಟ್ಟಿ ತಿಳಿಸಿದ್ದಾರೆ.

ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ ಸ್ಕಿಲ್‌ಗೇಮ್ ಕ್ಲಬ್‌ಗಳು!
‘‘ನನಗೆ ಕರೆ ಮಾಡಿದ್ದ ಮಹಿಳೆಯೊಬ್ಬರು ಕಳೆದ ವರ್ಷ ತಮ್ಮ ಮಗನನ್ನು ಮೂಡಬಿದ್ರೆಯ ಕಾಲೇಜೊಂದಕ್ಕೆ ಸೇರಿಸಲಾಗಿತ್ತು. ಆದರೆ ಆತ ಕಾಲೇಜಿಗೆ ಹೋಗದೆ ನಗರದಲ್ಲಿ ಸ್ಕಿಲ್‌ಗೇಮ್‌ನಲ್ಲೇ ಕಾಲ ಕಳೆದ ಬಗ್ಗೆ ದೂರು ನೀಡಿದ್ದರು. ಕಳೆದ ವರ್ಷ ಸುರತ್ಕಲ್‌ನ ಕ್ಲಬ್‌ವೊಂದಕ್ಕೆ ದಾಳಿ ನಡೆಸಿದ ಸಂದರ್ಭವೂ ಒಂದೇ ಕಾಲೇಜಿನ ಹಲವು ವಿದ್ಯಾರ್ಥಿಗಳು ತರಗತಿ ಅವಧಿಯಲ್ಲಿ ಸ್ಕಿಲ್‌ಗೇಮ್‌ನಲ್ಲಿ ನಿರತವಾಗಿರುವುದು ಕಂಡು ಬಂದಿತ್ತು. ಈ ರೀತಿ ಪೋಷಕರು, ಮನೆಯವರಿಂದ ತಮ್ಮ ಹದಿಹರೆಯದ ಮಕ್ಕಳು, ಯುವಕರು ಈ ಸ್ಕಿಲ್‌ಗೇಮ್‌ಗೆ ಬಲಿಪಶುಗಳಾಗುತ್ತಿರುವ ಬಗ್ಗೆ ದಿನನಿತ್ಯ ದೂರುಗಳು ಬರುತ್ತಿವೆ. ಇವುಗಳನ್ನು ಮಟ್ಟ ಹಾಕದಿದ್ದರೆ ಮುಂದೊಂದು ದಿನ ಯುವ ಜನಾಂಗಕ್ಕೆ ಈ ಸ್ಕಿಲ್ ಗೇಮ್ ಕೂಡಾ ಮಾದಕ ದ್ರವ್ಯದ ಹವ್ಯಾಸದಂತೆ ಚಟವಾಗಿ ಬಿಡಲಿದೆ’’ ಎನ್ನುತ್ತಾರೆ ಮೇಯರ್ ಕವಿತಾ ಸನಿಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News