×
Ad

ಚೀನಾ ಭಾರತಕ್ಕೆ ಬೆದರಿಕೆಯಾಗಿಯೇ ಉಳಿಯಲಿದೆ: ಲೆ.ಜ.ಶರತ್‌ಚಂದ್

Update: 2017-07-25 17:49 IST

ಹೊಸದಿಲ್ಲಿ, ಜು.25: ಭವಿಷ್ಯದಲ್ಲಿ ಚೀನಾ ಭಾರತಕ್ಕೆ ಒಂದು ಬೆದರಿಕೆಯಾಗಿಯೇ ಉಳಿಯಲಿದೆ ಎಂದು ಸೇನಾಪಡೆಯ ಉಪಮುಖ್ಯಸ್ಥ ಲೆ.ಜ.ಶರತ್‌ಚಂದ್ ಹೇಳಿದ್ದಾರೆ.

ದೇಶದ ಉತ್ತರ ಭಾಗದಲ್ಲಿ ಭಾರೀ ಭೌಗೋಳಿಕ ವ್ಯಾಪ್ತಿ, ಬೃಹತ್ ಸಂಪನ್ಮೂಲ, ಭಾರೀ ಸೇನಾಶಕ್ತಿ ಹೊಂದಿರುವ ಚೀನಾವಿದೆ. ಉಭಯ ದೇಶಗಳ ಮಧ್ಯೆ ಹಿಮಾಲಯವಿದ್ದರೂ , ಮುಂಬರುವ ದಿನಗಳಲ್ಲಿ ಚೀನಾವು ನಮಗೆ ಬೆದರಿಕೆಯಾಗಿ ಉಳಿಯಲಿದೆ ಎಂದು ಶರತ್‌ಚಂದ್ ಹೇಳಿದರು. ದಿಲ್ಲಿಯಲ್ಲಿ ನಡೆದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಚೀನಾವು ತ್ವರಿತ ಗತಿಯಲ್ಲಿ ಸೇನೆಯನ್ನು ಆಧುನೀಕರಣಗೊಳಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ವಿಶ್ವದ ದ್ವಿತೀಯ ಬೃಹತ್ ಅರ್ಥವ್ಯವಸ್ಥೆ ಹೊಂದಿರುವ ಚೀನಾವು ಅಮೆರಿಕಕ್ಕೆ ಸರಿಸಾಟಿಯಾಗುವತ್ತ ಧಾವಿಸುತ್ತಿದೆ. ಈ ವರ್ಷ ಚೀನಾವು ತನ್ನ ರಕ್ಷಣಾ ಬಜೆಟನ್ನು 152 ಬಿಲಿಯನ್ ಡಾಲರ್‌ಗೆ ಹೆಚ್ಚಿಸಿದೆ . ಇದು ಭಾರತದ ರಕ್ಷಣಾ ಬಜೆಟ್‌ಗಿಂತ ಮೂರು ಪಟ್ಟು ಅಧಿಕವಾಗಿದೆ. ಆದರೆ ಚೀನಾದ ನೈಜ ರಕ್ಷಣಾ  ವೆಚ್ಚ ಇದಕ್ಕಿಂತಲೂ ಹೆಚ್ಚಿರುವ ಸಾಧ್ಯತೆಯಿದೆ ಎಂದವರು ಹೇಳಿದರು.

      ಪಾಕಿಸ್ತಾನದ ಬಗ್ಗೆ ಉಲ್ಲೇಖಿಸಿದ ಅವರು, ಒಂದು ಸಣ್ಣ ರಾಷ್ಟ್ರವಾಗಿರುವ ಪಾಕ್‌ನ ಅರ್ಥವ್ಯವಸ್ಥೆ ಕೂಡಾ ಅಲ್ಪಪ್ರಮಾಣದಲ್ಲಿದೆ. ಅವರು ನಮ್ಮೆಂದಿಗೆ ಪೂರ್ಣ ಪ್ರಮಾಣದ ಯುದ್ದಕ್ಕೆ ತಯಾರಿಲ್ಲ. ಅಸಾಂಪ್ರದಾಯಿಕ ರೀತಿಯಲ್ಲಿ ಭಾರತಕ್ಕೆ ತೊಂದರೆ ನೀಡುವ ಮೂಲಕ ತನ್ನ ಸಾರ್ವಕಾಲಿಕ ಮಿತ್ರ ಚೀನಾಕ್ಕೆ ಒಪ್ಪಿಗೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರು. ದಕ್ಷಿಣ ಏಶ್ಯಾವು ವಿಶ್ವದ ಅತ್ಯಂತ ಅಸ್ಥಿರ ಪ್ರದೇಶಗಳಲ್ಲಿ ಒಂದು ಎನಿಸಿಕೊಂಡಿದ್ದು , ಭಾರತವು ಇದರ ಕೇಂದ್ರ ಪ್ರದೇಶದಲ್ಲಿ ಇರುವ ಕಾರಣ ಈ ಪ್ರದೇಶದ ಮೇಲೆ ಪ್ರಭಾವ ಬೀರುವ ಸ್ಥಾನದಲ್ಲಿದೆ. ಆದರೆ ವಿಶ್ವವು ಆರ್ಥಿಕ ಮತ್ತು ಸೈನಿಕ ಸಾಮರ್ಥ್ಯವನ್ನು ಪರಿಗಣಿಸುವ ಕಾರಣ ಭಾರತ ಆರ್ಥಿಕವಾಗಿ ಬಲಿಷ್ಠಗೊಳ್ಳುವ ಅಗತ್ಯವಿದೆ ಎಂದು ಶರತ್‌ಚಂದ್ರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News