ಸ್ವಪ್ರಶಂಸೆಯಲ್ಲಿ ತೊಡಗುವ ಮೂಲಕ ಯುದ್ಧ ಗೆಲ್ಲಲು ಸಾಧ್ಯವಿಲ್ಲ: ಕೇಂದ್ರ ಸರಕಾರವನ್ನು ಟೀಕಿಸಿದ ಶಿವಸೇನೆ

Update: 2017-07-25 13:48 GMT

ಮುಂಬೈ,ಜು.25: ಚೀನಾವನ್ನು ಪ್ರಚೋದಿಸುವ ಮುನ್ನ ಸರಕಾರವು ತನ್ನ ಯುದ್ಧ ಸನ್ನದ್ಧತೆಯನ್ನು ಗಮನದಲ್ಲಿಟ್ಟುಕೊಳ್ಳುವ ಅಗತ್ಯವಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಹೇಳಿದ್ದಾರೆ.

ಬಿಜೆಪಿಯನ್ನು ಕಟುವಾಗಿ ಟೀಕಿಸಿರುವ ಅವರು, ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಚುನಾವಣೆಗಳನ್ನು ಯಾರೂ ಗೆಲ್ಲಬಹುದು, ಆದರೆ ಸ್ವಪ್ರಶಂಸೆಯಲ್ಲಿ ತೊಡಗುವ ಮೂಲಕ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.

ಇತ್ತೀಚಿಗೆ ಪಾಕಿಸ್ತಾನ ಮತ್ತು ಚೀನಾದಿಂದ ಬೆದರಿಕೆಗಳು ಹೆಚ್ಚುತ್ತಿವೆ ಮತ್ತು ಅವರೊಂದಿಗೆ ಹೋರಾಡಲು ನಮ್ಮ ಬಳಿ ಸಾಕಷ್ಟು ಮದ್ದುಗುಂಡುಗಳೂ ಇಲ್ಲ. ಅಲ್ಲಿಗೆ ಕಳೆದ ಮೂರು ವರ್ಷಗಳಲ್ಲಿ ಈ ಪ್ರಬಲ ಸರಕಾರ ಮಾಡಿದ್ದಾದರೂ ಏನು ಎಂದು ಶಿವಸೇನೆಯ ಮುಖವಾಣಿ ‘ಸಾಮನಾ’ಕ್ಕೆ ನೀಡಿರುವ ಸಂದರ್ಶನದ ಅಂತಿಮ ಭಾಗದಲ್ಲಿ ಠಾಕ್ರೆ ಪ್ರಶ್ನಿಸಿದ್ದಾರೆ.

1962ರ ಭಾರತಕ್ಕೂ ಈಗಿನ ಭಾರತಕ್ಕೂ ವ್ಯತ್ಯಾಸವಿದೆ ಎಂದು ಚೀನಾಕ್ಕೆ ಹೇಳುವ ನಾವು ನಮ್ಮ ಬಾಯಿಯನ್ನು ತೆರೆಯುವ ಮುನ್ನ ನಮ್ಮ ಬಳಿ ಯಾವ ರೀತಿಯ ಮದ್ದುಗುಂಡುಗಳಿವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ಕುಟುಕಿ ದ್ದಾರೆ.

ಬೃಹತ್ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯ ತನ್ನ ಭರವಸೆಯನ್ನು ಸರಕಾರವು ಈಡೇರಿಸಿಲ್ಲ ಎಂದು ಬೆಟ್ಟು ಮಾಡಿದ ಅವರು, ನೋಟು ಅಮಾನ್ಯದ ಬಳಿಕ ಕಳೆದ ನಾಲ್ಕೈದು ತಿಂಗಳುಗಳಲ್ಲಿ 15-16 ಲಕ್ಷ ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಮತ್ತು ಭವಿಷ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News