ಜೆರುಸಲೇಂ: ಮಸೀದಿ ಆವರಣದಲ್ಲಿ ಲೋಹಶೋಧಕಗಳ ತೆರವು ಆರಂಭ
ಜೆರುಸಲೇಂ, ಜು. 25: ಜೆರುಸಲೇಂನ ಅಲ್-ಅಕ್ಸ ಮಸೀದಿಯ ಆವರಣದಲ್ಲಿ ಸ್ಥಾಪಿಸಲಾಗಿರುವ ಲೋಹಶೋಧಕಗಳನ್ನು ತೆರವುಗೊಳಿಸುವ ಕಾರ್ಯವನ್ನು ಇಸ್ರೇಲ್ ಮಂಗಳವಾರ ಆರಂಭಿಸಿದೆ.
ಭದ್ರತಾ ಮಿತ್ರಪಕ್ಷ ಜೋರ್ಡಾನ್ ಸೇರಿದಂತೆ ಮುಸ್ಲಿಮ್ ಜಗತ್ತಿನೊಂದಿಗೆ ಏರ್ಪಟ್ಟಿರುವ ಬಿಕ್ಕಟ್ಟನ್ನು ತಿಳಿಗೊಳಿಸುವ ಉದ್ದೇಶದಿಂದ ಅದು ಈ ಕ್ರಮ ತೆಗೆದುಕೊಂಡಿದೆ.
ಈ ಧಾರ್ಮಿಕ ಆವರಣದ ಉಸ್ತುವಾರಿಯನ್ನು ಇಸ್ರೇಲ್ ಮತ್ತು ಜೋರ್ಡಾನ್‌ಗಳು ಜಂಟಿಯಾಗಿ ಹೊಂದಿವೆ.
ಜೋರ್ಡಾನ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಲ್ಲಿ ನಡೆದ ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ಜೋರ್ಡಾನ್‌ನೊಂದಿಗೆ ಏರ್ಪಟ್ಟಿದ್ದ 24 ಗಂಟೆಗಳ ರಾಜಕೀಯ ಬಿಕ್ಕಟ್ಟು ತಿಳಿಯಾದ ಹಿನ್ನೆಲೆಯಲ್ಲಿ ಲೋಹಶೋಧಕಗಳನ್ನು ತೆರವುಗೊಳಿಸಲಾಗಿದೆ.
ಸ್ಕ್ರೂಡ್ರೈವರ್‌ನಿಂದ ತಿವಿಯಲು ಬಂದ ಇಬ್ಬರು ಜೋರ್ಡಾನಿಯನ್ನರ ಮೇಲೆ ಇಸ್ರೇಲ್ ರಾಯಭಾರ ಕಚೇರಿಯ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದಾಗ ಇಬ್ಬರೂ ಜೋರ್ಡಾನಿಯನ್ನರು ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ. ಜೋರ್ಡಾನ್‌ನಲ್ಲಿರುವ ಇಸ್ರೇಲ್ ರಾಯಭಾರ ಸಿಬ್ಬಂದಿ ಸೋಮವಾರ ರಾತ್ರಿ ಇಸ್ರೇಲ್‌ಗೆ ವಾಪಸಾಗಿದ್ದಾರೆ.
ತನಿಖೆ ಎದುರಿಸದೆ ಭದ್ರತಾ ಸಿಬ್ಬಂದಿ ಜೋರ್ಡಾನ್‌ನಿಂದ ಹೊರ ಹೋಗುವಂತಿಲ್ಲ ಎಂದು ಜೋರ್ಡಾನ್ ಆರಂಭದಲ್ಲಿ ಹೇಳಿತ್ತು. ಭದ್ರತಾ ಸಿಬ್ಬಂದಿಗೆ ರಾಜತಾಂತ್ರಿಕ ರಕ್ಷಣೆ ಇದೆ ಎಂಬ ವಾದವನ್ನು ಇಸ್ರೇಲ್ ಮುಂದಿಟ್ಟಿತ್ತು.
ಇಬ್ಬರು ಇಸ್ರೇಲಿ ಪೊಲೀಸ್ ಕಾವಲುಗಾರರನ್ನು ಬಂದೂಕುಧಾರಿಗಳು ಕೊಂದ ಬಳಿಕ, ಆವರಣದ ದ್ವಾರಗಳಿಗೆ ಇಸ್ರೇಲ್ ಲೋಹಶೋಧಕಗಳನ್ನು ಅಳವಡಿಸಿತ್ತು. ಇದು ಮುಸ್ಲಿಮ್ ಜಗತ್ತಿನ ಆಕ್ರೋಶಕ್ಕೆ ಕಾರಣವಾಯಿತು. ಇದರ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದವು.
ಇಸ್ರೇಲ್, ಜೋರ್ಡಾನ್ ನಾಯಕರ ಮಾತುಕತೆ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಜೋರ್ಡಾನ್ ದೊರೆ ದ್ವಿತೀಯ ಅಬ್ದುಲ್ಲಾ ಸೋಮವಾರ ತಡರಾತ್ರಿ ಬಿಕ್ಕಟ್ಟಿನ ಬಗ್ಗೆ ಫೋನ್‌ನಲ್ಲಿ ಚರ್ಚಿಸಿದರು.
ಜೆರುಸಲೇಂನ ಹಳೆನಗರದಲ್ಲಿ ಅಲ್-ಅಕ್ಸ ಮಸೀದಿಯನ್ನು ಒಳಗೊಂಡ 37 ಎಕರೆ ಜಮೀನಿನ ಬಗ್ಗೆಯೂ ಅವರು ಮಾತುಕತೆ ನಡೆಸಿದರು.
ಈ ಜಮೀನು ಇಸ್ಲಾಮ್‌ನ ಮೂರನೆ ಅತ್ಯಂತ ಪವಿತ್ರ ಹಾಗೂ ಜುಡಾಯಿಸಮ್ (ಯುಹೂದಿಗಳ ಧರ್ಮ)ನ ಅತ್ಯಂತ ಪವಿತ್ರ ಸ್ಥಳವಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿರುಸಿನ ರಾಜತಾಂತ್ರಿಕ ಚಟುವಟಿಕೆಗಳು ನಡೆದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಧ್ಯಪ್ರಾಚ್ಯ ರಾಯಭಾರಿ ಜಾಸನ್ ಗ್ರೀನ್‌ಬ್ಲಾಟ್ ಸೋಮವಾರ ಜೆರುಸಲೇಂನಲ್ಲಿ ನೆತನ್ಯಾಹುರನ್ನು ಭೇಟಿಯಾದರು.