ಹಕ್ಕುಪತ್ರ ಸಿಗದ ಫಲಾನುಭವಿಗಳಿಂದ ಹೋರಾಟ-ಆತ್ಮಹತ್ಯೆ ಎಚ್ಚರಿಕೆ
ಪುತ್ತೂರು, ಜು. 25: ಅಕ್ರಮ ಸಕ್ರಮ ಯೋಜನೆಯಡಿ ನಾವು 19 ವರ್ಷಗಳ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಎರಡೂವರೆ ತಿಂಗಳ ಹಿಂದೆಯಷ್ಟೇ ಮಂಜೂರು ಮಾಡಲಾಗಿದ್ದರೂ ಇದೀಗ ಮತ್ತೆ ಹಕ್ಕು ಪತ್ರ ನೀಡಲು ಸತಾಯಿಸಲಾಗುತ್ತಿದೆ. ಇದರ ಹಿಂದೆ ರಾಜಕೀಯ ವ್ಯಕ್ತಿಗಳ ಮತ್ತು ತಾಲೂಕು ಕಚೇರಿಯ ಮಧ್ಯವರ್ತಿಗಳ ಕೈವಾಡವಿರುವ ಶಂಕೆ ಇದ್ದು, ತಕ್ಷಣ ನಮಗೆ ಹಕ್ಕು ಪತ್ರ ನೀಡುವ ಕೆಲಸವಾಗದಿದ್ದಲ್ಲಿ ಉಗ್ರ ಹೋರಾಟ ನಡೆಸುವುದು ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಕೋಣಾಲು ಗ್ರಾಮದ ಪಾಂಡಿಬೆಟ್ಟು ನಿವಾಸಿ ಎಂ.ಜೆ.ಅಬ್ರಾಹಂ ಅವರು ಎಚ್ಚರಿಸಿದ್ದಾರೆ.
ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1998ರಲ್ಲಿ ತಾನು 30ಸೆಂಟ್ಸ್, ಮಣಿ ಎಸ್ ಅವರು 90ಸೆಂಟ್ಸ್, ಎಂ.ಜೆ.ವರ್ಗೀಸ್ ಅವರು 20 ಸೆಂಟ್ಸ್ ,ನಂದನ್ .ಎಸ್ ಅವರು 53 ಸೆಂಟ್ಸ್ ಮತ್ತು ಪ್ರಿನ್ಸ್ ಟಿ.ಎ. ಕುಟುಂಬದವರು 15ಸೆಂಟ್ಸ್ ಸ್ಥಳವನ್ನು ಮಂಜೂರುಗೊಳಿಸುವಂತೆ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ, ಆ ಬಳಿಕ ಕಚೇರಿಗೆ ಅಲೆದಾಟ ಆರಂಭಿಸಿದ್ದೆವು ಎಂದರು.
ನಾವು ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ವಿನಯಕುಮಾರ್ ಸೊರಕೆ ಅವರು ಪುತ್ತೂರಿನಲ್ಲಿ ಶಾಸಕರಾಗಿದ್ದರು. ಅರಣ್ಯ ಇಲಾಖೆಯ ಆಕ್ಷೇಪ ಇದೆ ಎನ್ನುವ ಹಿನ್ನಲೆಯಲ್ಲಿ ಆ ಸಂದರ್ಭದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್‌ನಲ್ಲಿ ನಮ್ಮ ಅರ್ಜಿಗಳನ್ನು ಮಂಜೂರುಗೊಳಿಸದೆ ತಡೆಹಿಡಿಯಲಾಗಿತ್ತು. ಆದರೆ 4 ವರ್ಷಗಳ ಹಿಂದೆ ಅರಣ್ಯ ಇಲಾಖೆಯು ನಡೆಸಿದ ಸರ್ವೆಯಲ್ಲಿ ಈ ಸ್ಥಳವು ಅರಣ್ಯ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ದೃಢಪಟ್ಟಿದ್ದರೂ ಆ ಸಂದರ್ಭದಲ್ಲಿ ಎದುರಾಗಿದ್ದ ಚುನಾವಣೆಯ ಹಿನ್ನಲೆಯಲ್ಲಿ ಮತ್ತೆ ಮಂಜೂರಾತಿ ಪ್ರಕ್ರಿಯೆ ಮುಂದೂಡಲ್ಪಟ್ಟಿತ್ತು, ಬಳಿಕ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯವರು ಜಂಟಿ ಸರ್ವೆ ನಡೆಸಿ ಇದು ಅರಣ್ಯ ಇಲಾಖೆಗೆ ಸಂಬಂಧಪಟ್ಟ ಸ್ಥಳವಲ್ಲ ಎಂದು ಸರ್ಟಿಫಿಕೇಟ್ ನೀಡಿದ ಹಿನ್ನಲೆಯಲ್ಲಿ ಇದೀಗ ಎರಡು ತಿಂಗಳ ಹಿಂದೆ ನಮ್ಮ ಅರ್ಜಿಗಳನ್ನು ಮಂಜೂರು ಮಾಡಲಾಗಿದೆ ಎಂದರು.
ನಾವು ಅರ್ಜಿಗಳನ್ನು ಮಂಜೂರು ಮಾಡಿಸಿಕೊಳ್ಳಲು ತಾಲ್ಲೂಕು ಕಚೇರಿಗೆ ಅಲೆದಾಡಿದ್ದಕ್ಕೆ ಲೆಕ್ಕವಿಲ್ಲ. ಶಾಸಕ ಅಂಗಾರ ಅವರು ಅಕ್ರಮ ಸಕ್ರಮ ಬೈಠಕ್‌ನಲ್ಲಿ ಅರ್ಜಿಗಳನ್ನು ಮಂಜೂರುಗೊಳಿಸಿ ಇದೀಗ ಎರಡೂವರೆ ತಿಂಗಳು ಕಳೆದರೂ ನಮಗಿನ್ನೂ ಹಕ್ಕು ಪತ್ರ ನೀಡಲಾಗಿಲ್ಲ. ತಾಲ್ಲೂಕು ಕಚೇರಿಯ ಗುಮಾಸ್ತ ಚೆನ್ನಪ್ಪ ಗೌಡ ಮತ್ತು ಗೋಳಿತೊಟ್ಟು ಗ್ರಾಮಕರಣಿಕರು ಸುಳ್ಳು ಕಾರಣಗಳನ್ನು ನೀಡಿ ಹಕ್ಕುಪತ್ರ ನೀಡಲು ಸತಾಯಿಸುತ್ತಿದ್ದಾರೆ. ಅಫಿದಾವಿತ್ ನೀಡುವಂತೆ ಗ್ರಾಮಕರಣಿಕರು ಹಾಗೂ ಅಪೇಕ್ಷಾ ಪತ್ರ ನೀಡುವಂತೆ ಗುಮಾಸ್ತ ಚೆನ್ನಪ್ಪ ಗೌಡ ಅವರು ತಿಳಿಸಿದ ಮೇರೆಗೆ 10ದಿನಗಳ ಹಿಂದೆಯೇ ಅದನ್ನು ನೀಡಲಾಗಿದೆ.ಆದರೂ ನಮಗೆ ಹಕ್ಕು ಪತ್ರ ನೀಡಲಾಗಿಲ್ಲ ಎಂದು ಆರೋಪಿಸಿದರು.
ತಮ್ಮ ವಾಸ್ತವ್ಯದ ಭೂಮಿಯನ್ನು ಅಕ್ರಮಸಕ್ರಮ ಯೋಜನೆಯಡಿಯಲ್ಲಿ ಮಂಜೂರು ಮಾಡಿಕೊಳ್ಳಲು 19 ವರ್ಷಗಳೇ ಬೇಕಾಯಿತು. ಇದೀಗ ಮತ್ತೆ ಹಕ್ಕುಪತ್ರ ನೀಡಲು ನಮ್ಮನ್ನು ಸತಾಯಿಸಲಾಗುತ್ತಿರುವುದರಿಂದ ಕೂಲಿ ಕೆಲಸ ಮಾಡಿ ಬದುಕುವ ಬಡವರಾದ ನಾವು ತೀರಾ ನೊಂದಿದ್ದೇವೆ. ಹಕ್ಕು ಪತ್ರ ಸಿಗದ ಕಾರಣ ಸರ್ಕಾರದ ಯಾವುದೇ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ ಎಂದು ಅಳವತ್ತುಕೊಂಡ ಅವರು ಸರ್ಕಾರದ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಾದರೂ ಸಂಬಂಧಪಟ್ಟ ಅಧಿಕಾರಿಗಳು ನಮಗೆ ತಕ್ಷಣ ಹಕ್ಕು ಪತ್ರ ನೀಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ತಪ್ಪಿದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಇಲ್ಲವೇ ತಾಲ್ಲೂಕು ಕಚೇರಿಯ ಎದುರು ಉಗ್ರ ಪ್ರತಿಭಟನೆ ಆರಂಭಿಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ ಇದೀಗ ಹಕ್ಕು ಪತ್ರಕ್ಕಾಗಿ ಕಾಯುತ್ತಿರುವ ಕೊಣಾಲು ಗ್ರಾಮದ ಪಾಂಡಿಬೆಟ್ಟು ನಿವಾಸಿಗಳಾದ ಪ್ರಿನ್ಸ್ ಟಿ.ಎ ಮತ್ತು ಮಣಿ ಎಸ್ ಉಪಸ್ಥಿತರಿದ್ದರು.