ಆನಂದ ಆಶ್ರಮ ಸಂಯುಕ್ತ ಪದವಿ ಪೂರ್ವಕಾಲೇಜಿನ ಶಿಕ್ಷಕರ-ಪಾಲಕರ ಸಭೆ
ಭಟ್ಕಳ,ಜು.25: ಆನಂದ ಆಶ್ರಮ ಸಂಯುಕ್ತ ಪದವಿ ಪೂರ್ವಕಾಲೇಜಿನ ಶಿಕ್ಷಕರ-ಪಾಲಕರ ಸಭೆಯು ಶಾಲಾ ಸಭಾ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರಿನ ಅಸುರ್‍ಲೈನ್ ಫ್ರಾನ್ಸಿಸ್ಕನ್ ಸಂಸ್ಥೆಯ ಉಪ ಕಾರ್ಯದರ್ಶಿ ಲೀನಾ ರೋಡ್ರಿಗಸ್ ಒಂದು ಶಾಲೆಗೆ ಆ ಶಾಲೆಯ ವಿದ್ಯಾರ್ಥಿಗಳು ಮತ್ತು ಪಾಲಕರೇ ಆಸ್ತಿ. ಅವರಿಂದ ಉತ್ತಮ ಸಹಕಾರ ದೊರೆತಾಗ ಮಾತ್ರ ಶಿಕ್ಷಣ ಸಂಸ್ಥೆಯು ಉತ್ತಮವಾಗಿ ನಡೆಯಲು ಸಾಧ್ಯವಾಗುವುದು. ಪ್ರತಿಯೋರ್ವ ಪಾಲಕರೂ ಕೂಡಾ ತಮ್ಮ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುವತ್ತ ಪ್ರಯತ್ನಿಸಬೇಕು, ಅದು ಅವರ ಕರ್ತವ್ಯವೂ ಕೂಡಾ ಹೌದು ಎಂದರು. ನಿನ್ನೆಯಷ್ಟೇ ನಿದನರಾದ ಉಡುಪಿಯ ಯು.ಆರ್.ರಾವ್ ಅವರು ಒಂದು ಬಡಕುಟುಂಬದಿಂದ ಬಂದವರು. ಇಂದು ಪ್ರಪಂಚವೇ ಅವರತ್ತ ನೋಡುವಂತೆ ಮಾಡಿದ್ದಾರೆಂದರೆ ಅವರ ಅಪಾರ ಸಾಧನೆಗೆ ಪರಿಶ್ರಮವೇ ಕಾರಣ.
ಅಪಾರವಾದ ನಂಬಿಕೆಯಿಂದ ಮುನ್ನೆಡೆದಾಗಎಲ್ಲವೂ ಯಶಸ್ವೀಯಾಗಲು ಸಾಧ್ಯ ಎಂದ ಅವರು ತಮ್ಮ ಮಕ್ಕಳನ್ನು ಬೆಳೆಸುವಲ್ಲಿ ಪಾಲಕರು ಹೆಚ್ಚಿನ ಗಮನ ಹರಿಸಬೇಕು ಎಂದೂ ಕರೆ ನೀಡಿದರು.
ಮುಖ್ಯ ವಕ್ತಾರರಾಗಿ ಉಪಸ್ಥಿತರಿದ್ದ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಖ್ಯಾತ ವೈದ್ಯ ಡಾ.ನಸೀಮ್ ಖಾನ್ ಮಾತನಾಡಿ ಶಾಲೆಗೆ ಹೋಗುವ ಹದಿಹರೆಯದ ಮಕ್ಕಳ ಸಮಸ್ಯೆಗಳು ಹಾಗೂ ಶಿಕ್ಷಕರು ಮತ್ತು ಪಾಲಕರಿಂದ ಅದಕ್ಕೆ ಪರಿಹಾರ ಎನ್ನುವ ವಿಷಯದ ಕುರಿತು ಪಾಲಕರ ಮನ ಮುಟ್ಟುವಂತೆ ಮಾತನಾಡಿದರು.
ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಇರುವಾಗ ಪಾಲಕರು ಹೆಚ್ಚು ಸಹನೆಯಿಂದ ಇರಬೇಕು.
ಮಕ್ಕಳಲ್ಲಿ ಅನಾವಶ್ಯಕವಾಗಿ ದುಡುಕುವುದು, ಅವರ ಭಾವನೆಗಳನ್ನು ವಿರೋಧಿಸುವುದು ಮಾಡುವುದಕ್ಕಿಂತ ಅವರನ್ನುಅರ್ಥ ಮಾಡಿಕೊಂಡು ಅವರಿಗೆ ತಿಳಿಸುವ ರೀತಿಯಲ್ಲಿಯೇ ತಿಳಿಸಬೇಕಾಗುತ್ತದೆ. ಮಕ್ಕಳ ಮೆದುಳು ಅವರ ಹದಿಹರೆಯದ ವಯಸ್ಸಿನಲ್ಲಿ ಹೆಚ್ಚು ಸೂಕ್ಷ್ಮವಾಗಿರುವುದಲ್ಲದೇ ದೊಡ್ಡವರ ಮೆದುಳಿನ ಹಾಗೆ ಬೆಳೆದಿರುವುದಿಲ್ಲ. ಮಕ್ಕಳಿಗೆ ಆ ಸಮಯದಲ್ಲಿ ಒಂದು ಶಾಲೆಯಲ್ಲಿ ಇನ್ನೊಂದು ಮನೆಯಲ್ಲಿ ಎರಡು ಕಡೆಗಳಲ್ಲಿಯೂ ಕೂಡಾ ಬೇರೆ ಬೇರೆ ಸಮಸ್ಯೆಗಳು ಎದುರಾಗಬಹುದು.
ಮಕ್ಕಳ ನಡೆತೆಯಲ್ಲಿ ವ್ಯತ್ಯಾಸವಾಗಬಹುದು.ಅವರಿಗೆ ಕೀಳರಿಮೆ, ಶಾಲೆಗೆ ಹೋಗುವುದಕ್ಕೆ ಭಯ, ಕಿನ್ನತೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುಕ್ಕೆ ಮುಜುಗರ ಇಂತವೆಲ್ಲ ಕಂಡಾಗ ಪಾಲಕರು ಅವರ ಸಮಸ್ಯೆಗೆ ಪರಿಹಾರ ಸೂಚಿಸಬೇಕಾಗುತ್ತದೆ. ಮಕ್ಕಳಿಗೆ ಯಾವುದೇ ಶಿಕ್ಷೆ ಕೊಡುವುದಾಗಲೀ, ಬಂಧನಕಾರಿಯಾದ ವರ್ತನೆಯನ್ನಾಗಲೀ ಮಾಡವುದು ಸರಿಯಲ್ಲ ಎಂದ ಅವರು ಹದಿಹರೆಯದ ಮಕ್ಕಳ ಮನಸ್ಸನ್ನುಅರಿತು ಅವರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದರು.
ಪಾಲಕರ ಸಮಿತಿಯ ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ ಅವರು ಮಾತನಾಡಿ ನಾವು ನಮ್ಮ ಶಾಲೆಯ ಕುರಿತು ನಂಬಿಕೆಯನ್ನು ಹೊಂದಿರಬೇಕು. ಪ್ರತಿಯೋರ್ವ ಪಾಲಕರೂ ಕೂಡಾ ನಮ್ಮ ಶಾಲೆಯ ಕುರಿತು ಉತ್ತಮವಾದುದನ್ನೇ ಮಾತನಾಡಿದಾಗ ಇತರರೂ ನಮ್ಮ ಶಾಲೆಯ ಕುರಿತು ಗೌರವ ಭಾವನೆ ಹೊಂದುವಂತಾಗುವುದು
.ನಮ್ಮ ಶಾಲೆಯ ಉತ್ತಮವಾದ ಶಿಕ್ಷಕ ವೃಂದದ ಶ್ರಮ, ಪಾಲಕರ ಸಹಕಾರ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ಪ್ರತಿ ವರ್ಷ ಉತ್ತಮ ಪಲಿತಾಂಶವನ್ನು ಪಡೆಯುತ್ತಿದ್ದೇವೆ ಎಂದರು.
ಆನಂದಆಶ್ರಮಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಫೆಲಿಕ್ಸಡಿಸೋಜ, ಸಿಸ್ಟರ್ ಆರೋಗ್ಯಮ್ಮ ಉಪಸ್ಥಿತರಿದ್ದರು.
2016-17ನೇ ಸಾಲಿನಲ್ಲಿಎಸ್. ಎಸ್. ಎಲ್. ಸಿ.ಯಲ್ಲಿ ಪ್ರಥಮ ಹತ್ತು ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಪಿ.ಯು.ಸಿ.ದ್ವಿತೀಯ ವರ್ಷದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪಾಲಕರೊಂದಿಗೆ ಗೌರವಿಸಲಾಯಿತು.
ಸಂಯುಕ್ತ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಥೆರೇಸಿಯಾ ಸೆರಾ ಸ್ವಾಗತಿಸಿ, ಶಾಲೆಯ ವಿವಿಧ ನಿಯಮಗಳನ್ನು ಪಾಲಕರಿಗೆ ತಿಳಿಸಿದರು. ಹಿರಿಯ ಶಿಕ್ಷಕ ಪೆಟ್ರಿಕ್‍ಟೆಲ್ಲಿಸ್ ವರದಿ ವಾಚಿಸಿದರು. ಸಿಸ್ಟರ್ ಜುಡಿತ್ ಹಾಗೂ ಗೋದಾವರಿ ನಿರೂಪಿಸಿದರು.ಸಿಸ್ಟರ್ ಆರೋಗ್ಯಮ್ಮ ವಂದಿಸಿದರು.