ಅಮೆರಿಕದ ಕಣ್ಗಾವಲು ವಿಮಾನವನ್ನು ತಡೆದ ಚೀನಿ ಯುದ್ಧ ವಿಮಾನಗಳು

Update: 2017-07-25 14:53 GMT

ವಾಶಿಂಗ್ಟನ್, ಜು. 25: ಕಳೆದ ವಾರಾಂತ್ಯದಲ್ಲಿ ಪೂರ್ವ ಚೀನಾ ಸಮುದ್ರದ ಆಕಾಶದಲ್ಲಿ ಅಮೆರಿಕದ ನೌಕಾ ಕಣ್ಗಾವಲು ವಿಮಾನವೊಂದನ್ನು ಚೀನಾದ ಎರಡು ಯುದ್ಧ ವಿಮಾನಗಳು ಅಡ್ಡಗಟ್ಟಿದವು ಎಂದು ಅಮೆರಿಕದ ಅಧಿಕಾರಿಗಳು ಸೋಮವಾರ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಚೀನಾದ ಒಂದು ವಿಮಾನವಂತೂ ಅಮೆರಿಕದ ವಿಮಾನದಿಂದ ಸುಮಾರು 91 ಮೀಟರ್ ಅಂತರದ ವ್ಯಾಪ್ತಿಗೆ ಬಂದಿತ್ತು ಎಂದು ಅವರು ಹೇಳಿದ್ದಾರೆ.

ರವಿವಾರ ಚೀನಾದ ಜೆ-10 ಯುದ್ಧ ವಿಮಾನವೊಂದು ಅಮೆರಿಕದ ಇಪಿ-3 ವಿಮಾನದ ಸಮೀಪಕ್ಕೆ ಬಂತು ಹಾಗೂ ಆಗ ಅಮೆರಿಕದ ವಿಮಾನವು ತನ್ನ ಪಥವನ್ನು ಬದಲಿಸಬೇಕಾಯಿತು ಎಂದು ಆರಂಭಿಕ ವರದಿಗಳು ಹೇಳಿವೆ ಎಂದು ಅಧಿಕಾರಿಗಳು ತಿಳಿಸಿದರು.

ಚೀನಾದ ವಿಮಾನಗಳ ಪೈಕಿ ಒಂದರಲ್ಲಿ ಶಸ್ತ್ರಾಸ್ತ್ರಗಳಿದ್ದವು ಹಾಗೂ ಈ ಘಟನೆಯು ಚೀನಾದ ನಗರ ಕಿಂಗಾಡೊದಿಂದ ಸುಮಾರು 148 ಕಿ.ಮೀ. ದೂರದಲ್ಲಿ ಸಂಭವಿಸಿದೆ.

ಆದರೆ, ಇಂಥ ಮುಖಾಮುಖಿ ಅಪರೂಪವೇನಲ್ಲ.

ಮೇ ತಿಂಗಳಲ್ಲಿ, ಚೀನಾದ ಎರಡು ಎಸ್‌ಯು-30 ವಿಮಾನಗಳು ಪೂರ್ವ ಚೀನಾ ಸಮುದ್ರದ ಮೇಲೆ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಹಾರುತ್ತಿದ್ದ ಅಮೆರಿಕದ ವಿಮಾನವೊಂದನ್ನು ತಡೆಹಿಡಿದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News