×
Ad

ಮಂಜನಾಡಿ: ಕೃಷಿಕರಿಗೆ ಇಲಾಖಾ ಮಾಹಿತಿ ಕಾರ್ಯಾಗಾರ

Update: 2017-07-25 20:51 IST

ಕೊಣಾಜೆ, ಜು. 25: ಎರಡು ಎಕರೆ ಜಾಗವಿರುವ ಕೃಷಿಕರಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆಯಡಿ ಶೇ.90ರಷ್ಟು ಸಹಾಯಧನ ಹಾಗೂ 2 ರಿಂದ 5 ಎಕರೆ ಜಾಗವಿರುವ ಕೃಷಿಕರಿಗೆ ಶೇ. 50 ಸಹಾಯಧನವನ್ನು ಕೃಷಿ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ವತಿಯಿಂದ ನೀಡಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ನೇತ್ರಾವತಿ ಹೇಳಿದರು.

ಅವರು ಮಂಜನಾಡಿ ಗ್ರಾಮ ಪಂಚಾಯತ್, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಮಂಗಳೂರು ಇದರ ಸಹಯೋಗದೊಂದಿಗೆ ಮಂಜನಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿಕರಿಗೆ ಇಲಾಖೆ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಅಡಿಕೆ ತೋಟ ಪುನಶ್ಚೇತನಕ್ಕೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಮಾತ್ರ ಅವಕಾಶವಿದ್ದು, ಪಂಚಾಯತ್ ನಲ್ಲಿ ಉದ್ಯೋಗ ಚೀಟಿಯನ್ನು ನೋಂದಾಯಿಸಿ ಯೋಜನೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಯೋಜನೆಯಡಿ 200 ಗಿಡಗಳಿಗೆ 24,000 ರೂ ಸಹಾಯಧನ ಹಾಗೂ ಗೊಬ್ಬರ, ಗಿಡ ಖರೀದಿ ರಶೀದಿಗಳಿದ್ದಲ್ಲಿ ಅದನ್ನು ಇಲಾಖೆಯಿಂದ ಪಡೆದುಕೊಳ್ಳಬಹುದು. ಗೇರು, ಬಾಳೆ, ಕೋಕೊ, ತೆಂಗು ಗಿಡಗಳನ್ನು ಇಲಾಖೆಯಿಂದ ವಿತರಿಸಲಾಗುವುದು. ಕಾಳು ಮೆಣಸು ಪುನಶ್ಚೇತನದಡಿ ಇಲಾಖೆ ವತಿಯಿಂದ 1 ಎಕರೆಗೆ 200 ಗಿಡಗಳನ್ನು ನೀಡಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎನ್.ಎಸ್ ಕರೀಂ ಮಾತನಾಡಿ, ಮಂಜನಾಡಿ ಗ್ರಾಮ ಪಂಚಾಯತ್, ತೋಟಗಾರಿಕೆ ಇಲಾಖೆ ಜಂಟಿಯಾಗಿ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್ ಕೃಷಿಮೇಳವನ್ನು ಆಯೋಜಿಸುವ ಅನಿವಾರ್ಯತೆಯಿದೆ. ಮೇಳದಲ್ಲಿ ತೆಂಗಿನ ಗಿಡ, ಅಡಿಕೆ ಗಿಡ, ಕಾಳು ಮೆಣಸಿನ ಗಿಡ ಹೀಗೆ ಹಲವಾರು ಬಗೆಯ ಗಿಡಗಳನ್ನು ವಿತರಿಸಬೇಕಿದೆ. ಕೃಷಿಕರು ಮೇಳದಲ್ಲಿ ಭಾಗವಹಿಸುವ ಮೂಲಕ ತಮ್ಮ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಂದು ಯೋಜನೆಯಡಿ ಸಿಗುವ ಸವಲತ್ತುಗಳನ್ನು ಪಡೆಯಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಹಾಯಧನ ಚೆಕ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಇಲಾಖೆಯ ಹಿರಿಯ ಪಶುವೈದ್ಯಕೀಯ ಪರೀಕ್ಷಕ ದೇವಾನಂದ. ಎಸ್, ಸಹಾಯಕ ಕೃಷಿ ಅಧಿಕಾರಿ ಬಾಲಕೃಷ್ಣ, ನಿವೃತ್ತ ತೋಟಗಾರಿಕಾ ಅಧಿಕಾರಿ ಕೇಶವ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರ ಭಂಡಾರಿ, ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್, ಉಪಾಧ್ಯಕ್ಷೆ ಮರಿಯಮ್ಮ, ಪಂಚಾಯತ ಮಾಜಿ ಅಧ್ಯಕ್ಷ ಮೊದಿನ್ ಕುಂಞ ಮಾರಾಟಿಮೂಲೆ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮಾನಾಥ ಪೂಂಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News