×
Ad

ಮರಳು ಸಾಗಾಟ ನಿರಾತಂಕ: ಆರೋಪ

Update: 2017-07-25 21:00 IST

ಮಂಗಳೂರು, ಜು.25: ಮರಳುಗಾರಿಕೆ ನಿಷೇಧ ಮಾಡಲಾಗಿದ್ದರೂ, ಮಳವೂರಿನಲ್ಲಿ ಮರಳು ಸಾಗಾಟ ನಿರಾತಂಕವಾಗಿ ನಡೆಯುತ್ತಿದೆ. ಮರಳು ರಾಶಿ ಕಂಡು ಬಂದರೂ ದಂಡ ಹಾಕಿ, ಮತ್ತೆ ಪರವಾನಿಗೆ ನೀಡಲಾಗುತ್ತದೆ. ಇದರಿಂದ ಬೇರೆ ರಾಜ್ಯಕ್ಕೆ ಎಗ್ಗಿಲ್ಲದೇ ಮರಳು ಸಾಗಾಟವಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

ಮಂಗಳೂರು ತಾಪಂ ಅಧ್ಯಕ್ಷ ಮಹಮ್ಮದ್ ಮೋನು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯ ವಿಶ್ವನಾಥ ಶೆಟ್ಟಿ ಈ ಆರೋಪ ಮಾಡಿದರು.

ತಹಸೀಲ್ದಾರ್ ಮಹಾದೇವಯ್ಯ ಪ್ರತಿಕ್ರಿಯಿಸಿ, ಮರಳು ಸಾಗಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈಗಾಗಲೇ ಗ್ರಾಮ ಮಟ್ಟದಲ್ಲಿ ಕಾರ್ಯಪಡೆಯೊಂದನ್ನು ರಚಿಸಲಾಗಿದೆ. ಮಳವೂರು ವೆಂಟೆಂಡ್ ಡ್ಯಾಂನಿಂದ ರೈಲ್ವೆ ಓವರ್ ಟ್ರಾಕ್‌ವರೆಗೆ ಮರಳುಗಾರಿಕೆ ಅವಕಾಶ ನೀಡದಂತೆ ಕೋರಿಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಈ ಸಂಬಂಧ ಪ್ರತಿಕ್ರಿಯೆ ಬಂದ ನಂತರ ಮುಂದಿನ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕುಡಿಯುವ ನೀರು ಕಲುಷಿತಗೊಂಡಿರುವ ಬಗ್ಗೆ ಆಗಿರುವ ಕ್ರಮವೇನು ಎಂದು ಸದಸ್ಯ ಬಶೀರ್ ಅಹಮ್ಮದ್ ಪ್ರಶ್ನಿಸಿದರು. ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ನೀರು ಕಲುಷಿತಗೊಂಡಿರುವ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ವೆ ಕಾರ್ಯ ಸರಕಾರದ ಉಚಿತ ಸೇವೆ
94 ಸಿ ಅಡಿಯಲ್ಲಿ ಈಗಾಗಲೇ 18,869 ಅರ್ಜಿಗಳು ಬಂದ್ದಿದ್ದು, ಈ ಪೈಕಿ 3,900 ಅರ್ಜಿಗಳು ವಿಲೇವಾರಿ ಆಗಿದೆ. ಉಳಿದ 12,881 ಅರ್ಜಿಗಳನ್ನು ಎರಡು ತಿಂಗಳಲ್ಲಿ ವಿಲೇ ಮಾಡಲಾಗುವುದು. ಹಕ್ಕು ಪತ್ರಗಳಿಗೆ, ಸರ್ವೆ ಕಾರ್ಯ ಸರಕಾರದ ಉಚಿತ ಸೇವೆಯಾಗಿದ್ದು, ಅದಕ್ಕೆ ಯಾವುದೇ ರೀತಿಯಲ್ಲಿ ಹಣ ನೀಡಬೇಕಾಗಿಲ್ಲ. ಅರ್ಜಿಗೆ 65 ರೂ. ನೀಡಬೇಕಾಗುತ್ತದೆ. ಆನಂತರ ಭೂಮಿ ಮಂಜೂರಾದ ಬಳಿಕವೇ ನಿಗದಿತ ಹಣ ನೀಡಬೇಕಾಗುತ್ತದೆ. ಅನಗತ್ಯವಾಗಿ ವಿಎಗಳು ಹಣ ಕೇಳಿದಲ್ಲಿ ತತ್‌ಕ್ಷಣ ದೂರು ನೀಡಬಹುದು ಎಂದು ಮಂಗಳೂರು ತಹಸೀಲ್ದಾರ್ ಮಹದೇವಯ್ಯ ತಿಳಿಸಿದರು.

ಮೂಡಬಿದಿರೆ ತಹಶೀಲ್ದಾರ್ ಮಹಮ್ಮದ್ ಇಸಾಕ್ ಮಾತನಾಡಿ, ಮೂಡಬಿದಿರೆಯಲ್ಲಿ ಹಕ್ಕುಪತ್ರ ನೀಡಲು ಡೀಮ್ಡ್ ಫಾರೆಸ್ಟ್ ಸಮಸ್ಯೆ ತಲೆದೋರಿದೆ. ಈಗಾಗಲೇ ಉಂಟಾಗಿರುವ ಸಮಸ್ಯೆ ಬಗೆಹರಿಸಿಕೊಂಡು ಹಕ್ಕು ಪತ್ರ ವಿತರಿಸುವ ಕೆಲಸ ನಡೆಯಲಿದೆ ಎಂದರು.

ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ.ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್, ಸ್ಥಾಯಿ ಸಮಿತಿಯ ರೀಟಾ ಕುಟಿನ್ಹೊ, ಕಾರ್ಯನಿರ್ವಹಣಾಧಿಕಾರಿ ಸದಾನಂದ ಮತ್ತತಿರರು ಉಪಸ್ಥಿತರಿದ್ದರು.

ಸರ್ವೆ ಕಾರ್ಯಕ್ಕೆ ಹಣ ನೀಡಬೇಕಾಗಿಲ್ಲ
ಗ್ರಾಮ ಮಟ್ಟದಲ್ಲಿ ಸರ್ವೇ ಕಾರ್ಯ ಮಾಡಬೇಕಾದರೆ ಗ್ರಾಮ ಕರಣಿಕರಿಗೆ ಒಂದು ಸಾವಿರ ರೂ.ಗಳಿಂದ ಎರಡು ಸಾವಿರ ರೂ.ಗಳ ತನಕ ನೀಡಬೇಕೆಂದು ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪಕ್ಕೆ ತಹಸೀಲ್ದಾರ್ ಮಹದೇವಯ್ಯ ಅವರು, ಸರ್ವೆ ಕಾರ್ಯಕ್ಕೆ ಯಾವುದೇ ರೀತಿಯ ಹಣ ನೀಡುವ ನಿಯಮವಿಲ್ಲ.

ಒಂದು ವೇಳೆ ಅಂತಹ ಪ್ರಕರಣಗಳು ಕಂಡು ಬಂದರೆ ತತ್‌ಕ್ಷಣ ನನ್ನ ಗಮನಕ್ಕೆ ತನ್ನಿ. ಅಂತಹ ಗ್ರಾಮ ಕರಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News