×
Ad

ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ: ವೈಭವ ಮತ್ತು ಪರಂಪರೆಗಳ ಸಮ್ಮಿಲನ

Update: 2017-07-25 21:41 IST

ಹೊಸದಿಲ್ಲಿ,ಜು.25: ಚುನಾಯಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಕ್ಬರ್ ರಸ್ತೆಯ ನಿವಾಸದ ದ್ವಾರದ ಮೇಲೆ ಬೆರಳುಗಳ ಮೆಲುವಾದ ಬಡಿತ ಮಂಗಳವಾರ ನೂತನ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಾಂದಿಯನ್ನು ಹಾಡಿತ್ತು. ಹೌದು, ರಾಷ್ಟ್ರಪತಿಗಳ ಮಿಲಿಟರಿ ಕಾರ್ಯದರ್ಶಿ ಮೇಜಅನಿಲ್ ಖೋಸ್ಲಾ ಅವರು ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಅವರನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಲು ಅಲ್ಲಿ ತಲುಪಿದ್ದರೆ,ಅತ್ತ ರಾಷ್ಟ್ರಪತಿ ಭವನದ ಸ್ಟಡಿ ರೂಮ್‌ನಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತನ್ನ ಉತ್ತರಾಧಿಕಾರಿಯ ದಾರಿಯನ್ನು ಕಾಯುತ್ತಿದ್ದರು.

ಕೋವಿಂದ್ ಆಗಮನದ ಬಳಿಕ ಉಭಯ ನಾಯಕರನ್ನು ಭವ್ಯ ರಾಷ್ಟ್ರಪತಿ ಭವನದ ಮುಂಭಾಗದ ಅಂಗಳದಲ್ಲಿಯ ವಂದನಾ ವೇದಿಕೆಗೆ ಬೆಂಗಾವಲಿನಲ್ಲಿ ಕರೆದೊಯ್ಯಲಾ ಯಿತು. ಮುಖರ್ಜಿಯವರು ರಾಷ್ಟ್ರಪತಿಗಳ ಅಂಗರಕ್ಷಕ ಪಡೆ (ಪಿಬಿಜಿ)ಯಿಂದ ಅಂತಿಮ ವಂದನೆಯನ್ನು ಸ್ವೀಕರಿಸಿದರೆ ಚುನಾಯಿತ ರಾಷ್ಟ್ರಪತಿ ಕೋವಿಂದ್ ಅವರ ಎಡಭಾಗದಲ್ಲಿ ನಿಂತಿದ್ದರು.

ಬಳಿಕ ಉಭಯ ನಾಯಕರು ಕಪ್ಪು ಲಿಮೋಸಿನ್‌ನಲ್ಲಿ ರೈಸಿನಾ ಹಿಲ್‌ನಿಂದ ಸಂಸತ್ತಿನ ಸೆಂಟ್ರಲ್ ಹಾಲ್‌ಗೆ ಪ್ರಯಾಣಿಸಿದರು. ಈ ವೇಳೆ ಮುಖರ್ಜಿಯವರು ಬಲಭಾಗದಲ್ಲಿ ಮತ್ತು ಕೋವಿಂದ್ ಅವರು ಎಡಭಾಗದಲ್ಲಿ ಆಸೀನರಾಗಿದ್ದರು.

ಶ್ವೇತವರ್ಣದ ಸಾಂಪ್ರದಾಯಿಕ ಸಮವಸ್ತ್ರ ಮತ್ತು ಚಿನ್ನದ ಅಲಂಕಾರಿಕ ಕುಸುರಿ ಹೊಂದಿದ್ದ ನೀಲಿ ಪೇಟಾಗಳನ್ನು ಧರಿಸಿದ್ದ ಪಿಬಿಜಿಯ ಅಶ್ವಾರೋಹಿಗಳ ಭವ್ಯವಾದ ಮೆರವಣಿಗೆ ಉಭಯ ನಾಯಕರಿಗೆ ಬೆಂಗಾವಲಾಗಿ ಸಾಗಿತ್ತು.

ರಾಷ್ಟ್ರಪತಿ ಭವನದಿಂದ ಸಂಸತ್ತಿನವರೆಗೆ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದ ಮೂರೂ ಸಶಸ್ತ್ರ ಪಡೆಗಳ ಒಂದು ಸಾವಿರ ಯೋಧರು ರಕ್ಷಣಾ ಪಡೆಗಳ ಸುಪ್ರೀಂ ಕಮಾಂಡರ್ ಆದ ರಾಷ್ಟ್ರಪತಿಗಳಿಗೆ ಸಾಂಪ್ರದಾಯಿಕ ‘ಹಝಾರ್ ಸಲಾಂ’ ಸಲ್ಲಿಸಿದರು.

ಮೆರವಣಿಗೆಯು ಸಂಸತ್ತಿನ ಗೇಟ್ ನಂ. 5 ತಲುಪಿದಾಗ ಅಲ್ಲಿ ಕಾದು ನಿಂತಿದ್ದ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರು ರಾಷ್ಟ್ರಪತಿ ಮುಖರ್ಜಿ ಮತ್ತು ಚುನಾಯಿತ ರಾಷ್ಟ್ರಪತಿ ಕೋವಿಂದ್ ಅವರನ್ನು ಸ್ವಾಗತಿಸಿ ಸೆಂಟ್ರಲ್ ಹಾಲ್‌ಗೆ ಕರೆದೊಯ್ದರು.

ಪ್ರಮಾಣ ವಚನ ಸ್ವೀಕಾರದ ಬಳಿಕ ಸೆಂಟ್ರಲ್ ಹಾಲ್‌ನಲ್ಲಿ ವಿವಿಧ ನಾಯಕರನ್ನು ಭೇಟಿಯಾದ ಕೋವಿಂದ್ ರಾಷ್ಟ್ರಪತಿಗಳ ಲಿಮೋಸಿನ್‌ನಲ್ಲಿ ರಾಷ್ಟ್ರಪತಿ ಭವನಕ್ಕೆ ಮರಳಿದರು. ಈಗ ನೂತನ ರಾಷ್ಟ್ರಪತಿಗಳು ಬಲಭಾಗದಲ್ಲಿ ಆಸೀನರಾಗಿದ್ದರೆ, ಮುಖರ್ಜಿ ಎಡಭಾಗದಲ್ಲಿ ಕುಳಿತುಕೊಂಡಿದ್ದರು.

ಉಭಯ ನಾಯಕರು ರಾಷ್ಟ್ರಪತಿ ಭವನವನ್ನು ತಲುಪಿದ ಬಳಿಕ ಕೋವಿಂದ್ ಅವರು ರಿಜಿಸ್ಟರ್‌ನಲ್ಲಿ ಸಹಿ ಮಾಡಿದ ನಂತರ ಅಧಿಕಾರವನ್ನು ವಹಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News