ತ್ಯಾಜ್ಯ ನಿರ್ವಹಣೆಗೆ ಜನರಲ್ಲಿ ಅರಿವು ಮೂಡಿಸಿ: ದಿನಕರ ಬಾಬು
ಉಡುಪಿ, ಜು.25: ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿಯಲ್ಲಿ ಉಡುಪಿ ಜಿಲ್ಲೆ ನಿರೀಕ್ಷೆಗಿಂತ ತೀರಾ ಹಿಂದುಳಿದಿದೆ. ಆದುದರಿಂದ ತ್ಯಾಜ್ಯ ವಿಲೇವಾರಿ ಯಲ್ಲಿ ಗ್ರಾಮೀಣ ಪ್ರದೇಶಗಳ ಜನರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಪ್ರತಿಯೊಂದು ಗ್ರಾಪಂಗಳು ಈ ಕೆಲಸ ಮಾಡಬೇಕಾಗಿದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಇಂಡಿಯನ್ ಸ್ಟ್ರಾಟಜಿಕ್ ಪೆಟ್ರೋಲಿಯಂ ರಿಸರ್ವ್‌ಸ್ ಲಿ. (ಐಎಸ್‌ಪಿಆರ್‌ಎಲ್) ಉಡುಪಿ ಇವರ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಲಾಗಿರುವ ಎರಡು ದಿನಗಳ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆ ಹಲವು ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ದೇಶದಲ್ಲೇ ಮುಂಚೂಣಿಯಲ್ಲಿದೆ. ಆದರೆ ತ್ಯಾಜ್ಯ ಸಂಗ್ರಹ, ಸಮರ್ಪಕ ನಿರ್ವಹಣೆ ಹಾಗೂ ತ್ಯಾಜ್ಯದ ಬಳಕೆಯಲ್ಲಿ ಹಿಂದಿದ್ದೇವೆ. ಇದರಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಲು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಜನಪ್ರತಿನಿಧಿಗಳಿಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಅದೇ ರೀತಿ ಜಿಲ್ಲೆ ಜಲಸಾಕ್ಷರತೆಯಲ್ಲೂ ಹಿಂದುಳಿದಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೂ ಎಪ್ರಿಲ್-ಮೇ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮಳೆ ನೀರಿನ ಸಂಗ್ರಹ ಹಾಗೂ ಅಂರ್ತಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಜಲ ಜಾಗೃತಿ ಮೂಡಿಸಿ, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ದಿನಕರ ಬಾಬು ಹೇಳಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಇಡೀ ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿಯೇ ಇಂದು ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ತ್ಯಾಜ್ಯ ವಿಲೇವಾರಿಗೆ ಅಗತ್ಯವಿರುವ ಸರಕಾರಿ ಭೂಮಿಯ ಕೊರತೆ ಹಾಗೂ ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಲು ಪರಿಣಿತರ ಕೊರತೆ ಇದೆ. ತ್ಯಾಜ್ಯ ನಿರ್ಮೂಲನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಾಗಾರ ವನ್ನು ಏರ್ಪಡಿಸಲಾಗಿದೆ ಎಂದರು.
ನಿಜವಾಗಿ ನೋಡುವುದಾದರೆ ಕಸ ಎಂಬುದೇ ಇಲ್ಲ. ಸಮರ್ಪಕವಾಗಿ ಬಳಸಿದರೆ ಕಸವೂ ಒಂದು ಸಂಪನ್ಮೂಲವಾಗಬಲ್ಲದು. ಇದರಿಂದ ಆದಾಯ ವನ್ನೂ ಗಳಿಸಬಹುದಾಗಿದೆ. ಉಡುಪಿ ಈಗಾಗಲೇ ಬಯಲು ಶೌಚ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿದೆ. ಅದೇ ರೀತಿ ಇಡೀ ದೇಶದಲ್ಲಿ ಉಡುಪಿ ಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡುವುದು ಎಲ್ಲರ ಜವಾಬ್ದಾರಿ ಎಂದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂಸದಸ್ಯೆ ಗೀತಾಂಜಲಿ ಸುವರ್ಣ, ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಮೋಗವೀರ, ಕಾರ್ಕಳ ತಾಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಾಪು ಪುರಸಭೆ ಅಧ್ಯಕ್ಷೆ ಸೌಮ್ಯ, ಕಾರ್ಕಳ ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್, ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ರತ್ನಾ ನಾಗರಾಜ್, ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.
ಉಡುಪಿ ಜಿಪಂನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರು. ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ವಂದಿಸಿದರು. ಉಡುಪಿ ಜಿಪಂನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರು. ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ವಂದಿಸಿದರು.
‘ಉಡುಪಿ 2018 ಅ.2ಕ್ಕೆ ತ್ಯಾಜ್ಯಮುಕ್ತ ಜಿಲ್ಲೆ’
ಎರಡು ದಿನಗಳ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ದೇಶದ ಖ್ಯಾತನಾಮ ತ್ಯಾಜ್ಯ ನಿರ್ವಹಣಾ ತಜ್ಞ, ತಮಿಳುನಾಡು ರಾಜ್ಯದ ವೆಲ್ಲೂರಿನ ಇಂಡಿಯನ್ ಗ್ರೀನ್ ಸರ್ವಿಸ್‌ನ ಯೋಜನಾ ನಿರ್ದೇಶಕ ವೆಲ್ಲೂರು ಶ್ರೀನಿವಾಸನ್ ಮಾತನಾಡಿ, ಉಡುಪಿ ಜಿಲ್ಲೆಯನ್ನು 2018ರ ಅ.2ರೊಳಗೆ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿಯೊಂದಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.
ರಾಜ್ಯದಲ್ಲಿ ಮೈಸೂರು ತ್ಯಾಜ್ಯ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದೆ. ದೇಶದಲ್ಲಿ ಅದು 5-6ನೇ ಸ್ಥಾನದಲ್ಲಿದೆ. ಅದೇ ರೀತಿ ಉಡುಪಿ ಜಿಲ್ಲೆಯನ್ನೂ ತ್ಯಾಜ್ಯಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯವಿದೆ. ಇದೇ ಆ.15ಕ್ಕೆ ಪೈಲೆಟ್ ಯೋಜನೆಗೆ ಕೆಲವು ಗ್ರಾಮಗಳ ಆಯ್ಕೆ ಪ್ರಕಟಿಸಲಾಗುವುದು ಎಂದ ಅವರು, ತ್ಯಾಜ್ಯ ಯಾವತ್ತೂ ಒಂದು ಕಸವಲ್ಲ. ಅದನ್ನು ಸಂಪನ್ಮೂಲವಾಗಿ ಪರಿವರ್ತಿಸಲು ಸಾಧ್ಯವಿದೆ ಎಂದರು.
ಒಂದೆರಡು ದಶಕಗಳ ಹಿಂದೆ ಕಸ ಎಂಬುದು ನಮ್ಮ ನಾಡಿನಲ್ಲಿ ಸಮಸ್ಯೆಯಾಗಿರಲಿಲ್ಲ. ಆದರೆ ನಾವು ತಪ್ಪು ದಾರಿಯಲ್ಲಿ ನಡೆದು ಅದನ್ನೊಂದು ಸಮಸ್ಯೆಯಾಗಿ ಮಾಡಿಕೊಂಡಿದ್ದೇವೆ. ತ್ಯಾಜ್ಯವನ್ನು ಸಂಪನ್ಮೂಲ ಎಂದು ಪರಿಗಣಿಸಬೇಕಿದೆ. ತಾನು 2013-14ರಲ್ಲಿ ಬೆಂಗಳೂರಿನಲ್ಲಿ ನಡೆಸಿದ ಅಧ್ಯಯನದಂತೆ ಅಲ್ಲಿ ಉತ್ಪಾದನೆಯಾಗುವ ಕಸದಿಂದ ತಿಂಗಳಿಗೆ ಕನಿಷ್ಠ 27 ಕೋಟಿ ರೂ. ಆದಾಯ ಗಳಿಸಬಹುದಾಗಿದ್ದು, ಅಷ್ಟು ಪ್ರಮಾಣದ ಆದಾಯ ಕಸದ ರೂಪದಲ್ಲಿ ವ್ಯರ್ಥವಾಗುತ್ತಿದೆ ಎಂದರು.
ತಾವು ಈಗಾಗಲೇ ಈಶಾನ್ಯ ಭಾರತದ ಅಸ್ಸಾಂನ ಒಂದು ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ರೂಪುಗೊಳಿಸಿದ್ದು, ಪ್ರಸ್ತುತ ಉಡುಪಿ ಜಿಲ್ಲೆಯನ್ನು ದಕ್ಷಿಣ ಭಾರತದ ಮೊದಲ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಆಯ್ಕೆ ಮಾಡಲಾಗಿದೆ ಎಂದು ವೆಲ್ಲೂರು ಶ್ರೀನಿವಾಸನ್ ವಿವರಿಸಿದರು.