×
Ad

ಏಕಪಕ್ಷೀಯ ಜಾರಿಯಿಂದ ಬೀಡಿ ಕಾರ್ಮಿಕರಿಗೆ ಅನ್ಯಾಯ: ಸೈಯದ್ ಮುಜೀಬ್

Update: 2017-07-25 21:53 IST

ಮೂಡುಬಿದಿರೆ, ಜು. 25: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ಕೋಟ್ಪಾ ಕಾಯಿದೆಯ ಒಂದು ನಿಯಮವನ್ನು ಮಾತ್ರ ಸಮರ್ಥವಾಗಿ ಜಾರಿಗೆ ತಂದಿರುವ ಸರಕಾರಗಳು ಅದೇ ಕಾಯಿದೆಯಲ್ಲಿ ಉಲ್ಲೇಖಿತವಾಗಿರುವ ಬೀಡಿ ಕಾರ್ಮಿಕರಿಗೆ ಪರಿಹಾರ ನೀಡುವ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿವೆ. ಈ ಕಾಯಿದೆಯ ಏಕಪಕ್ಷೀಯ ಅನುಷ್ಠಾನದಿಂದಾಗಿ ಬೀಡಿ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಇದರ ಕಾರ್ಯದರ್ಶಿ ಸೈಯದ್ ಮುಜೀಬ್ ಹೇಳಿದ್ದಾರೆ.

ಅವರು ಸಿಐಟಿಯು ಹಾಗೂ ಬೀಡಿ ಕಾರ್ಮಿಕರ ಫೆಡರೇಶನ್ ಬೀಡಿ ಕಾರ್ಮಿಕರ ಸಮಸ್ಯೆಗಳ ಕುರಿತಾಗಿ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ತಮ್ಮ ವಿಚಾರ ಮಂಡಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನಗಳಂತೆ ಧೂಮಪಾನದ ಮೇಲೆ ನಿಯಂತ್ರಣ ಹೇರುವ ಉದ್ದೇಶಗಳಿಂದ ಸರಕಾರಗಳು ತರುತ್ತಿರುವ ನೀತಿಗಳಿಂದಾಗಿ ಬೀಡಿ ಕಾರ್ಮಿಕರು ಬೀದಿಪಾಲಾಗುವ ದುರವಸ್ಥೆ ಒದಗಿಬಂದಿದೆ. ಕನಿಷ್ಠ ಕೂಲಿ, ಹೆರಿಗೆ ಭತ್ಯೆ, ಫ್ರವಿಡೆಂಟ್ ಫಂಡ್, ಆರೋಗ್ಯ ಹಾಗೂ ಸಾಮಾಜಿಕ ಭದ್ರತೆಗಳನ್ನು ಬೀಡಿ ಕಾರ್ಮಿಕರಿಗೆ ಸರಕಾರ ಖಾತರಿಪಡಿಸಬೇಕು. ಹಣದ ಅಪಮೌಲ್ಯ ಹಾಗೂ ಜಿಎಸ್‌ಟಿ ಜಾರಿಯಿಂದಾಗಿ ಬೀಡಿ ಉದ್ಯಮವೂ ಸಂಪೂರ್ಣ ನೆಲಕಚ್ಚಿದ್ದು, ಲಕ್ಷಾಂತರ ಕಾರ್ಮಿಕರ ಸಮಸ್ಯೆ ಕೇಳುವವರಿಲ್ಲವಾಗಿದೆ ಎಂದರು.

ಬೀಡಿ ಉದ್ಯಮದ ರಕ್ಷಣೆಯ ಹೊಣೆಯನ್ನು ಬೀಡಿ ಕಾರ್ಮಿಕರು ಮಾತ್ರವಲ್ಲದೇ, ಗುತ್ತಿಗೆದಾರರು, ಇತರೆ ಕೆಲಸಗಾರರು, ಮಾಲಕರು ಹೊತ್ತುಕೊಳ್ಳಬೇಕು. ಉದ್ಯಮದ ಮೇಲಾಗಿರುವ ಆಘಾತದ ವಿರುದ್ಧ ಧ್ವನಿಯೆತ್ತುವ ಮೂಲಕ ನಮ್ಮನ್ನು ನಾವು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಎಐಟಿಯುಸಿಯ ಮುಖಂಡ ಸೀತರಾಮ್ ಉದ್ಯಮಕ್ಕೆ ಪುನಶ್ಚೇತನ ನೀಡುವ ಮೂಲಕ ಕನಿಷ್ಠ ಕೂಲಿ ಹಾಗೂ ಇತರ ಸವಲತ್ತುಗಳನ್ನು ಪಡೆಯುವಲ್ಲಿ ಹೋರಾಟ ಅಗತ್ಯ ಎಂದರು.

ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ವಸಂತ ಆಚಾರಿ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗೆದಾರರ ಸಂಘದ ಅಬ್ದುಲ್ ಖಾದರ್ ಕಿನ್ನಿಗೋಳಿ, ಅಬ್ದುಲ್ ರಹಿಮಾನ್ ಮೂಡುಬಿದಿರೆ, ಕೃಷ್ಣ ರೈ, ಕೃಷ್ಣಪ್ಪ ಬೋಳಾರ, ರವಿ ಉಡುಪಿ, ಗಂಗಾಧರ ರೈ ಪುತ್ತೂರು ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬೀಡಿಯ ಮೇಲೆ ಜಿಎಸ್‌ಟಿ ಹೇರಿಕೆಯಿಂದಾಗಿ ಉದ್ಯಮ ಸಂಕಷ್ಟದ ಪರಿಸ್ಥಿತಿಗೆ ತಲುಪಿದ್ದು, ಮಾಲಕರ ಮೇಲಾಗುತ್ತಿರುವ ನಷ್ಟ ನೇರವಾಗಿ ಕಾರ್ಮಿಕರ ಹೊರೆಯಾಗುತ್ತಿದೆ. 28% ಬೀಡಿಗೆ, 18% ನೂಲಿಗೆ, 16 % ತಂಬಾಕಿಗೆ ಜಿಎಸ್‌ಟಿ ಬರೆಯನ್ನು ಬೀಡಿ ಉದ್ಯಮದ ಮೇಲೆ ಎಳೆದಿರುವ ಕೇಂದ್ರ ಸರಕಾರದ ನಡೆಯಿಂದಾಗಿ ಕಾರ್ಮಿಕರು ಸಂಕಷ್ಟಕ್ಕೊಳಗಾಗಿದ್ದಾರೆ. -ವಸಂತ ಆಚಾರಿ, ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News