ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೆದ್ದಾರಿ ಬದಿಯ ಚರಂಡಿ

Update: 2017-07-25 17:42 GMT

ಬೆಳ್ತಂಗಡಿ, ಜು.25: ಮಂಗಳೂರು-ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿ ಗುರುವಾಯನಕೆರೆ ರಸ್ತೆ ಬದಿಯಲ್ಲಿ ಮುಚ್ಚಿದ ಚರಂಡಿ ಬಾಯ್ದೆರೆದುಕೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಗುರುವಾಯನಕೆರೆ ಪೇಟೆಯಿಂದ ಬೆಳ್ತಂಗಡಿಗೆಹೋಗುವ ಹೆದ್ದಾರಿಯ ಪಕ್ಕದಲ್ಲೇ ಚರಂಡಿ ಬಾವಿಯಾಕಾರದಂತೆ ತೆರೆದು ಕೊಂಡಿದೆ. ಜನರು ರಾತ್ರಿಯ ವೇಳೆ ಬಂದರೆ ಅಪಾಯ ಕಟ್ಟಿಟ್ಟದ್ದು. ಮಳೆಗಾಲವಾದ ಕಾರಣ ಎಲ್ಲಿ ಚರಂಡಿ ಇದೆ ಎಂಬುದೇ ಗೊತ್ತಾಗುತ್ತಿಲ್ಲ. ರಸ್ತೆಯಲ್ಲೇ ನೀರು ಹರಿಯುವ ಕಾರಣ ಇದು ಮಳೆ ಇಲ್ಲದ ವೇಳೆ ಮಾತ್ರ ಜನರ ಕಣ್ಣಿಗೆ ಕಾಣುತ್ತದೆ. ಮಳೆ ಬಂದರೆ ಇಲ್ಲಿ ಬಾಯ್ಬಿಟ್ಟ ಚರಂಡಿ ಕಾಣಸಿಗದು.

ಅಪಾಯದ ಬಗ್ಗೆ ಯಾವುದೇ ಮುನ್ನೆಚರಿಗೆ ತೆಗೆದುಕೊಂಡಿಲ್ಲ. ಸ್ಥಳೀಯರು ಅಡ್ಡಲಾಗಿ ಮರದ ತುಂಡುಗಳನ್ನು ಇಟ್ಟಿದ್ದಾರೆ. ಮೊದಲೇ ಇಕ್ಕಟ್ಟಾದ ಹೆದ್ದಾರಿಯಾಗಿದ್ದು ವಾಹನಗಳು ರಸ್ತೆ ಬದಿಗೆ ಹೋದರೆ ಅನಾಹುತ ಅಂತೂ ಖಂಡಿತ.

ಸರಿಯಾದ ಪುಟ್‌ಪಾತ್ ಇಲ್ಲ. ನಡೆದುಕೊಂಡು ಹೋಗುವ ಪಾದಚಾರಿಗಳ ಸಂಖ್ಯೆಯೂ ಸಾಕಷ್ಟಿವೆ. ಆಗಾಗ ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಇರುತ್ತದೆ. ನೀರು ಹೋಗಲು ಚರಂಡಿಯೂ ಇಲ್ಲ. ಇವೆಲ್ಲದರ ಮಧ್ಯೆಯೇ ಅಪಾಯಕ್ಕೆ ಎಡೆ ಮಾಡಿಕೊಡಲು ಬಾಯ್ದೆರೆದುಕೊಂಡಿದೆ ಚರಂಡಿ.
ಅಪಾಯ ಸಂಭವಿಸುವ ಮುನ್ನ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟ ಇಲಾಖೆ ಇದರ ಬಗ್ಗೆ ಎಚ್ಚೆತ್ತುಕೊಂಡು ಕ್ರಮ ಕೈಕೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News