ಕ್ರಿಕೆಟ್ ವಿವಾದ: ಇತ್ತಂಡಗಳ ಜಗಳದಲ್ಲಿ ನಾಲ್ವರಿಗೆ ಚೂರಿ ಇರಿತ

Update: 2017-07-26 12:50 GMT

ಹೊಸದಿಲ್ಲಿ, ಜು. 26: ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದ ಜಮಾಲಿ ಕಮಾಲಿ ಪಾರ್ಕ್ ನ ತಾತ್ಕಾಲಿಕ ಪಿಚ್ ಒಂದರಲ್ಲಿ ಯಾರು ಮೊದಲು ಕ್ರಿಕೆಟ್ ಆಡಬೇಕು ಎಂಬ ವಿಚಾರದಲ್ಲಿ ಎರಡು ತಂಡಗಳ ನಡುವ ಉಂಟಾದ ವಿವಾದ ವಿಕೋಪಕ್ಕೆ ತೆರಳಿದ ಪರಿಣಾಮ ನಾಲ್ಕು ಮಂದಿ ಯುವಕರು ಚೂರಿ ಇರಿತಕ್ಕೊಳಗಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಎಲ್ಲಾ ನಾಲ್ಕು ಮಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಐತಿಹಾಸಿಕ ಕುತುಬ್ ಮಿನಾರ್ ನಿಂದ ಕೆಲವೇ ನೂರು ಮೀಟರ್ ದೂರದಲ್ಲಿರುವ ಈ ಪಾರ್ಕಿನಲ್ಲಿ ಜಗಳ ನಡೆದಿತ್ತು. ಆರಂಭದಲ್ಲಿ ಸಂದೀಪ್ ಮತ್ತಾತನ ಸ್ನೇಹಿತರು ಇಲ್ಲಿನ ಪಿಚ್ ನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಲು ನಿರ್ಧರಿಸಿದ್ದರು. ಹುಡುಗರೆಲ್ಲರೂ ಹುಟ್ಟುಹಬ್ಬದ ಪಾರ್ಟಿಯೊಂದನ್ನು ಮುಗಿಸಿ ಬಂದಿದ್ದರಿಂದ ಎಲ್ಲರೂ ಮದ್ಯ ಸೇವಿಸಿದ್ದರು ಎನ್ನಲಾಗಿದೆ.

ಸುಮಾರು ಐದು ಗಂಟೆಯ ಹೊತ್ತಿಗೆ 18 ವರ್ಷದ ಅಬ್ದುಲ್ ಸಮದ್ ನೇತೃತ್ವದ ಇನ್ನೊಂದು ತಂಡ ಅಲ್ಲಿಗೆ ಆಗಮಿಸಿ ಪಿಚ್ ಬಿಟ್ಟುಕೊಡುವಂತೆ ಹೇಳಿದಾಗ ಜಗಳ ಆರಂಭಗೊಂಡಿತ್ತು . ತಮ್ಮ ಆಟ ಮುಗಿಯದೆ ಪಿಚ್ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಮೊದಲು ಆಟವಾಡುತ್ತಿದ್ದ ತಂಡದ ಸದಸ್ಯರು ಪಟ್ಟು ಹಿಡಿದಿದ್ದರು. ಸ್ವಲ್ಪ ಹೊತ್ತಲ್ಲೇ ಎರಡೂ ತಂಡಗಳು ಪರಸ್ಪರ ಕೈ ಮಿಸಲಾಯಿಸಲು ಆರಂಭಿಸಿದ್ದವು. ಸಮದ್ ಮತ್ತಾತನ ಗೆಳೆಯರು ಸಣ್ಣ ಚೂರಿಯೊಂದನ್ನು ಬಳಸಿ ಇನ್ನೊಂದು ತಂಡದ ಸದಸ್ಯರ ಮೇಲೆ ದಾಳಿ ನಡೆಸಿತ್ತೆನ್ನಲಾಗಿದೆ. ಈ ಜಗಳದಲ್ಲಿ ಸಮದ್ ಗೂ ಗಾಯಗಳಾಗಿವೆ.

ಪೊಲೀಸರು ಸ್ಥಳಕ್ಕಾಗಮಿಸಿದಾಗ ಸಮದ್ ಗಾಯಗೊಂಡು ಬಿದ್ದಿರುವುದು ಕಂಡು ಬಂತು. ಆತನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಇತರ ಗಾಯಾಳುಗಳನ್ನೂ ಗುರುತಿಸಿ ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಂದೀಪ್ ನೀಡಿದ ಹೇಳಿಕೆಯ ಆಧಾರದಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News