ಪ್ರತಿಪಕ್ಷದ ಕೋಲಾಹಲ:ಲೋಕಸಭೆ ಮುಂದೂಡಿಕೆ

Update: 2017-07-26 12:54 GMT

ಹೊಸದಿಲ್ಲಿ,ಜು.26: ತಮ್ಮ ಆರು ಸಹೋದ್ಯೋಗಿಗಳ ಅಮಾನತು ಆದೇಶವನ್ನು ಹಿಂದೆಗೆದುಕೊಳ್ಳಬೇಕು ಎಂಬ ಬೇಡಿಕೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಕುಪಿತ ಕಾಂಗ್ರೆಸ ಸದಸ್ಯರು ಬುಧವಾರ ಲೋಕಸಭೆಯ ಕಲಾಪಗಳಿಗೆ ವ್ಯತ್ಯಯವನ್ನೊಡ್ಡಿದ್ದು, ಸದನವನ್ನು ಅನಿವಾರ್ಯವಾಗಿ ದಿನದ ಮಟ್ಟಿಗೆ ಮುಂದೂಡುವಂತಾಯಿತು.

ಕೋಲಾಹಲಪೂರಿತ ಪ್ರತಿಭಟನೆಗಳಿಂದಾಗಿ ಮಧ್ಯಾಹ್ನ ಎರಡು ಬಾರಿ ಮುಂದೂಡಲ್ಪ ಟ್ಟಿದ್ದ ಸದನವನ್ನು 3:45ರ ಸುಮಾರಿಗೆ ದಿನದ ಮಟ್ಟಿಗೆ ಮುಂದೂಡಲಾಯಿತು.

 ದಿನದ ಹೆಚ್ಚಿನ ಭಾಗ ಹಲವಾರು ಕಾಂಗ್ರೆಸ್ ಸದಸ್ಯರು ಸದನದ ಅಂಗಳದಲ್ಲಿ ನಿಂತು ‘ಪ್ರಧಾನಿಗಳೇ,ಉತ್ತರಿಸಿ’, ‘ಸರ್ವಾಧಿಕಾರ ನಡೆಯದು’, ಜಾತಿ ಹೆಸರಿನಲ್ಲಿ ರಾಜಕೀಯ ನಿಲ್ಲಿಸಿ’,ಹಿಂದು,ಮುಸ್ಲಿಂ,ಸಿಖ್, ಕ್ರೈಸ್ತರು ಸೋದರರಾಗಿದ್ದಾರೆ ’ ಎಂಬಿತ್ಯಾದಿ ಘೋಷಣೆ ಗಳನ್ನು ಕೂಗುತ್ತಿದ್ದರು. ಆರು ಕಾಂಗ್ರೆಸ್ ಸದಸ್ಯರ ಅಮಾನತು ಕುರಿತಂತೆ ಈ ಸದಸ್ಯರು ‘ಸ್ಪೀಕರ್,ನ್ಯಾಯ ನೀಡಿ’ ಎಂಬ ಘೋಷಣೆಗಳನ್ನೂ ಕೂಗಿದ್ದು, ಒಂದು ಹಂತದಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯರೂ ಅವರೊಂದಿಗೆ ಸೇರಿದ್ದರಿ.

ಘೋಷಣೆಗಳ ನಡುವೆಯೇ ಸದನವು ಪ್ರಶ್ನೆವೇಳೆಯನ್ನು ಕೈಗೆತ್ತಿಕೊಂಡಿದ್ದು, ಶೂನ್ಯವೇಳೆಯ ಕಲಾಪಗಳನ್ನೂ ಭಾಗಶಃ ನಡೆಸಿತಲ್ಲದೆ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ(ತಿದ್ದುಪಡಿ) ಮಸೂದೆ,2016ನ್ನು ಅಂಗೀಕರಿಸಿತು.

ಮಧ್ಯಾಹ್ನ ಈ ಮಸೂದೆ ಅಂಗೀಕಾರಗೊಂಡ ಬೆನ್ನಿಗೇ ಸಹಾಯಕ ವಿತ್ತಸಚಿವ ಅರ್ಜುನ ರಾಮ ಮೇಘ್ವಾಲ್ ಅವರು ಕಂಪನಿಗಳ(ತಿದ್ದುಪಡಿ)ಮಸೂದೆ 2016ರ ಮೇಲೆ ಚರ್ಚೆಗೆ ಚಾಲನೆ ನೀಡಿದರು. ಆದರೆ ಕೋಲಾಹಲ ಮುಂದುವರಿದ ಹಿನ್ನೆಲೆಯಲ್ಲಿ ಉಪ ಸ್ಪೀಕರ್ ಎಂ.ತಂಬಿದುರೈ ಅವರು ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.

ಇದಕ್ಕೂ ಮುನ್ನ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರು ತಮ್ಮ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಮತ್ತು ಚರ್ಚೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಸದಸ್ಯರನ್ನು ಹಲವಾರು ಬಾರಿ ಕೋರಿಕೊಂಡಿದ್ದರೂ ಅವರು ಕೇಳಲು ಸಿದ್ಧರಿರಲಿಲ್ಲ.

ಯಾವುದೇ ವಿಷಯವನ್ನು ಚರ್ಚಿಸಲು ನಾವು ಸಿದ್ಧರಿದ್ದೇವೆ, ಆದರೆ ಅವರು ಸಿದ್ಧರಿಲ್ಲ ಎಂದ ಕುಮಾರ್, ಕೃಷಿ ಬಿಕ್ಕಟ್ಟಿನ ಚರ್ಚೆಯ ವೇಳೆಯೂ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದರು ಎಂದು ಹೇಳಿದರು.

ಅವರೇಕೆ ಸದನಕ್ಕೆ ಬರುತ್ತಾರೆ ಮತ್ತು ಸದನದಿಂದ ಹೊರಕ್ಕೆ ಹೋಗುತ್ತಾರೆ? ಎಲ್ಲ ಕಡೆಗಳಿಂದಲೂ ಅವರು ಹೊರಕ್ಕೆ ಹೋಗಲಿದ್ದಾರೆ ಎಂದು ಕುಮಾರ್ ಕುಟುಕಿದರು.

ಸೋಮವಾರ ಸ್ಪೀಕರ್‌ರತ್ತ ಕಾಗದಗಳನ್ನು ಎಸೆದಿದ್ದಕ್ಕಾಗಿ ಕಾಂಗ್ರೆಸ್ ಸದಸ್ಯರನ್ನು ಟೀಕಿಸಿದ ಕುಮಾರ್, ಇದು ಅತ್ಯಂತ ಖಂಡನೀಯವಾಗಿದೆ. ಅವರು ಕ್ಷಮೆ ಕೋರಬೇಕಾಗಿತ್ತು. ಇದು ಸಂಪ್ರದಾಯಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದರು.

ಬೆಳಿಗ್ಗೆ ಪ್ರಶ್ನೆವೇಳೆ ಆರಂಭಗೊಂಡ ಬೆನ್ನಿಗೇ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗೋರಕ್ಷಣೆಯ ನೆಪದಲ್ಲಿ ಹಿಂಸೆಯ ವಿಷಯವನ್ನೆತ್ತಿದರು. ಆದರೆ ಪ್ರಶ್ನೆವೇಳೆಯಲ್ಲಿ ಯಾವುದೇ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪೀಕರ್ ಸುಮಿತ್ರಾ ಮಹಾಜನ ಹೇಳಿದರು.

ಪ್ರಶ್ನೆವೇಳೆಯ ಬಳಿಕವೂ ಪ್ರತಿಭಟನೆಯನ್ನು ಮುಂದುವರಿಸಿದ ಕಾಂಗ್ರೆಸ್ ಸದಸ್ಯರು ಗೋರಕ್ಷಣೆಯ ಹೆಸರಿನಲ್ಲಿ ಹತ್ಯೆಗಳಿಂದ ಹಿಡಿದು ಕೃಷಿ ಬಿಕ್ಕಟ್ಟು ಮತ್ತು ರೈತರ ಬವಣೆವರೆಗೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಲು ಬಯಸಿದ್ದರು.

 ಇರಾಕ್‌ನ ಮೊಸುಲ್ ನಗರದಲ್ಲಿ ನಾಪತ್ತೆಯಾಗಿರುವ ಭಾರತೀಯರ ಕುರಿತು ಹೇಳಿಕೆ ನೀಡಲು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಎದ್ದು ನಿಂತಾಗಲೂ ಕಾಂಗ್ರೆಸ್ ಸದಸ್ಯರು ತಮ್ಮ ಪಟ್ಟು ಬಿಡಲಿಲ್ಲ. ಗುಂಪುಗಳಿಂದ ಹತ್ಯೆಗಳು ಮತ್ತು ರೈತರಿಗೆ ಸಂಬಂಧಿಸಿದ ವಿಷಯಗಳನ್ನೆತ್ತಲು ನಾವು ಬಯಸಿದ್ದೇವೆ ಎಂದು ಖರ್ಗೆ ಹೇಳುತ್ತಿದ್ದುದು ಕೇಳಿ ಬಂದಿತ್ತು.

ಮಧ್ಯಾಹ್ನ 12 ಗಂಟೆಗೆ ಸದನವನ್ನು ಮೊದಲ ಬಾರಿಗೆ ಮುಂದೂಡಿದ್ದ ಸ್ಪೀಕರ್ 12:45ಕ್ಕೆ ಮತ್ತೊಮ್ಮೆ ಮುಂದೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News