ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಬದ್ಧ: ಡಾ. ಜಗದೀಶ್
ಮಂಗಳೂರು, ಜು.26: ರೈತರ ಹಿತದೃಷ್ಟಿಯಿಂದ ವಿಶೇಷ ಆರ್ಥಿಕ ವಲಯ (ಎಸ್‌ಎಝಡ್) ಸ್ಥಾಪಿಸಲು ತಾನು ಬದ್ಧನಿರುವುದಾಗಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ತಿಳಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಎಝಡ್‌ಗಾಗಿ 250 ಎಕರೆ ಜಾಗವನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುವುದು. ಆದರೆ ಎಸ್‌ಎಝಡ್ ರಚನೆಯ ಸ್ವರೂಪದ ಬಗ್ಗೆ ರೈತರು, ತಜ್ಞರು, ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ಕೃಷಿ ಹಾಗೂತೋಟಗಾರಿಕಾ ಇಲಾಖೆಯ ಅಧಿಕಾರಿಗಳು ರಚಿಸಬೇಕು. ಆ ಸಮಿತಿಯ ವರದಿಯನ್ನು ಆಧರಿಸಿ ಮುಂದಿನ ಕ್ರವು ಕೈಗೊಳ್ಳಲಾಗುವುದು ಎಂದರು.
ಮುಂದಿನ ಎರಡು ತಿಂಗಳಲ್ಲಿ ಸಮಿತಿಯು ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ಸೂಚಿಸಿದ ಅವರು, ಎಸ್‌ಎಝಡ್‌ಗೆ ಪೂರಕವಾಗಿ ಕೃಷಿ ಉತ್ಪನ್ನಗಳನ್ನು ಬೆಳೆಸುವ ಕೆಲಸ ಆಗಬೇಕು ಎಂದರು.
ಕೃಷಿ ಉತ್ಪನ್ನಗಳನ್ನು ಹೊರ ದೇಶಗಳಿಗೆ ರಫ್ತು ಮಾಡಬೇಕಾದಲ್ಲಿ ಗುಣಮಟ್ಟವನ್ನು ಕಾಪಾಡಬೇಕಾಗುತ್ತದೆ. ಜತೆಗೆ ಬೇಡಿಕೆಗೆ ಅನುಸಾರವಾಗಿ ಉತ್ಪನ್ನಗಳನ್ನು ಸಿದ್ಧಪಡಿಸುವುದನ್ನೂ ಖಾತರಿಪಡಿಸುವಂತಾಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ರೈತರು ಅಡಕೆ ತೋಟದ ಜತೆಗೆ ಇತರ ತೋಟಗಾರಿಕಾ ಬೆಳೆಗಳ ಬಗ್ಗೆ ಆಸಕ್ತಿ ತೋರಬೇಕು ಎಂದು ಹೇಳಿದ ಅವರು, ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ ಕಾರ್ಯಾಗಾರವನ್ನು ನಡೆಸಬೇಕು. ಸುಳ್ಯದಲ್ಲಿ ಅಡಕೆಗೆ ಹಳದಿ ಎಲೆ ರೋಗದ ಬಗ್ಗೆ ರೈತರ ತಿಳುವಳಿಕೆಗೆ ಕಾರ್ಯಾಗಾರ ನಡೆಸುವಂತೆ ಅವು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಶಸ್ವಿನಿ ಯೋಜನೆಯಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಂದ ಸರಕಾರ ನಿಗದಿಪಡಿಸಿದ ದರಕ್ಕಿಂತಲೂ ಆಸ್ಪತ್ರೆಗಳು ಅಧಿಕ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದೆ. ಈ ನಿಟ್ಟಿನಲ್ಲಿ ಯಶಸ್ವಿನಿ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳ ಸಭೆ ನಡೆಸಿ ಸೂಕ್ತ ನಿರ್ದೇಶ ನೀಡಲು ಜಿಲ್ಲಾಧಿಕಾರಿಗಳು ತಿಳಿಸಿದರು.
ರೈತರಿಗೆ ಸಾಲ ಮಂಜೂರಾತಿಯಲ್ಲಿ ವಿಳಂಭ ಮಾಡುವ ಪ್ರಕರಣಗಳಿದ್ದರೆ ಲೀಡ್ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತರಲು ಅವರು ಸೂಚಿಸಿದರು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲೂ ರೈತ ಮುಖಂಡರ ಸಭೆ ನಡೆಸಲು ಸಂಬಂಧಪಟ್ಟವರಿಗೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯ ಹೆಚ್ಚಿಸಲು ಸುಮಾರು 69 ಕೋಟಿ ರೂ. ವೆಚ್ಚದಲ್ಲಿ 53 ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ ನರೇಗಾ ಯೋಜನೆಯಲ್ಲಿ ಗ್ರಾಮ ಪಂಚಾಯತ್‌ಗಳ ವ್ಯಾಪಿತಿಯಲ್ಲಿ 1000 ಕಿರು ಡ್ಯಾಂ ನಿರ್ಮಿಸಲಾಗುವುದು ಎಂದು ಸಭೆಗೆ ಅಧಿಕಾರಿಗಳು ತಿಳಿಸಿದರು.
ಜಂಟೀ ಕೃಷಿ ನಿರ್ದೇಶಕ ಕೆಂಪೇಗೌಡ ಮಾತನಾಡಿ, ಕೃಷಿ ಯಂತ್ರಧಾರೆ ಕೇಂದ್ರಗಳ ಮೂಲಕ ಕೃಷಿ ಯಂತ್ರಗಳನ್ನು ರೈತರಿಗೆ ಬಾಡಿಗೆಗೆ ನೀಡಲಾಗುತ್ತಿದೆ. ಈ ಯಂತ್ರಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ 3 ಗ್ರಾಮ ಪಂಚಾಯತ್‌ಗಳಿಗೊಂದರಂತೆ ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪಿಸಲು ರಾಜ್ಯ ಸರಕಾರಕ್ಕೆ ಪ್ರಸಾತಿವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮೂಡಬಿದ್ರೆಯಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಿಸಲು ಈಗಾಗಲೇ ಜಮೀನು ಕೃಷಿ ಇಲಾಖೆಗೆ ಹಸ್ತಾಂ ತರವಾಗಿದ್ದು, ಮುಂದಿನ 1 ವರ್ಷದೊಳಗೆ ಕೇಂದ್ರ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಪುತ್ತೂರು ಉಪವಿಭಾಗಾಧಿಕಾರಿ ಡಾ. ರಘು ನಂದನ ಮೂರ್ತಿ, ತೋಟಗಾರಿಕೆ ಉಪನಿರ್ದೇಶಕ ಎಚ್.ಆರ್. ಯೋಗೀಶ್, ಪಶುಸಂಗೋಪನಾ ಉಪನಿರ್ದೇಶಕ ತಿಪ್ಪೇಸ್ವಾಮಿ, ಸಹಕಾರ ಇಲಾಖೆ ಉಪಬಂಧಕ ಬಿ.ಕೆ. ಸಲೀಂ, ಲೀಡ್ ಬ್ಯಾಂಕ್ ಅಧಿಕಾರಿಗಳು, ಸಂಪತ್ ಸಾಮ್ರಾಜ್ಯ, ಯಾದವ ಶೆಟ್ಟಿ ಸೇರಿದಂತೆ ವಿವಿಧ ರೈತ ಸಂಘಟನೆ ಮುಖಂಡರು ಉಪಸ್ಥಿತರಿದ್ದರು.
ಕೃಷಿ ಭಾಗ್ಯಕ್ಕೆ 1 ಎಕರೆ ಮಿತಿ ಬೇಡ
ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗಲು ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಆದರೆ ಇದಕ್ಕೆ 1 ಎಕರೆಯ ಮಿತಿಯನ್ನು ವಿಧಿಸಲಾಗಿದೆ. ಜಿಲ್ಲೆಯಲ್ಲಿ 1 ಎಕರೆಗಿಂತ ಕಡಿಮೆ ಕೃಷಿಭೂಮಿ ಹೊಂದಿದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಅರ್ಹತೆ ಇದ್ದರೂ ಮಾನದಂಡದ ಕಾರಣಕ್ಕೆ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ. ಆದ್ದರಿಂದಈ ಮಿತಿಯನ್ನು ತೆಗೆಯಬೇಕು ಎಂದು ರೈತ ಮುಖಂಡ ರವಿಕಿರಣ ಪುಣಚ ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ ಕೃಷಿ ಇಲಾಖೆ ಅಧಿಕಾರಿ ಕೆಂಪೇ ಗೌಡ ಹೇಳಿದರು.
ಟೇಸ್ಟಿಂಗ್ ಪೌಡರ್ ನಿಷೇಧಕ್ಕೆ ಕ್ರಮ
ಹೊಟೇಲ್, ಬೇಕರಿ, ಡಾಬಾಗಳ ಆಹಾರ ವಸ್ತುಗಳಲ್ಲಿ ರುಚಿಗೆ ಬಳಸುವ ಪೌಡರನ್ನು ಆರೋಗ್ಯಕ್ಕೆ ಹಾನಿಕರ ಎಂಬ ಕಾರಣಕ್ಕೆ ನಿಷೇಧಿಸಲಾಗಿದೆ. ಆದರೂ ಅದನ್ನು ಬಳಸಲಾಗುತ್ತಿದ್ದು, ಇದು ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ. ಇದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು ಎಂದು ರೈತ ಮುಖಂಡು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಈ ವಿಷಯವನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತರುವುದಾಗಿ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ತಿಳಿಸಿದರು.