ಜು.29ರಂದು ಗುಹಾಲಯ ಚಲೋ ಹೋರಾಟ: ಕೇಶವ ಕೋಟೇಶ್ವರ

Update: 2017-07-26 13:46 GMT

ಉಡುಪಿ, ಜು.26: ಕುಂದಾಪುರ ತಾಲೂಕಿನ ಕಮಲಶಿಲೆಯ ಗುಪ್ಪಿ ಗುಹಾಲಯದಲ್ಲಿ ಅನಾದಿಕಾಲದಿಂದ ನವನಾಥ ಪಂಥದ ಅನುಯಾಯಿಗಳಾಗಿರುವ ಜೋಗಿ ಕುಟುಂಬದಿಂದ ನಡೆಯುತ್ತಿರುವ ಪೂಜೆಗೆ ಕಮಲಶಿಲೆಯ ಬ್ರಾಹ್ಮೀ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಆಪತ್ತು ಎದುರಾಗಿದ್ದು, ಗುಹಾಲಯದ ದೇವರುಗಳ ಅಸ್ತಿತ್ವವನ್ನೇ ಅಲ್ಲಗಳೆಯುವ ಹುನ್ನಾರ ನಡೆಸಲಾಗುತ್ತಿದೆ ಎಂದು ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿ ಆರೋಪಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಕೇಶವ ಕೋಟೇಶ್ವರ, ಇದರ ವಿರುದ್ಧ ಶ್ರೀಕ್ಷೇತ್ರ ಸಿದ್ಧಪೀಠ ಕೊಡ ಚಾದ್ರಿ ಹಲವರಿ ಮಠ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಜು.29ರಂದು ಬೆಳಗ್ಗೆ 10ಗಂಟೆಗೆ ಕಮಲಶಿಲೆ ಗುಪ್ಪಿ ಗುಹಾಲಯ ಚಲೋ ಹೋರಾಟವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು.

ಅತಿ ಪುರಾತನ ಗುಪ್ಪಿ ಗುಹಾಲಯದಲ್ಲಿ ಶ್ರೀಕಾಲಭೈರವ, ಶ್ರೀ ಅಮ್ಮನವರು, ನಾಗದೇವತೆ ಮುಂತಾದ ದೇವರುಗಳಿಗೆ ಅನಾದಿಕಾಲದಿಂದಲೂ ಪೂಜಾ ಕಾರ್ಯವನ್ನು ಗ್ರಾಮದಲ್ಲಿ ಶಕ್ತಿ ದೇವತೆಗಳ ಆರಾಧಕರಾಗಿರುವ ಜೋಗಿಗಳು (ಬಳೆಗಾರ ವೃತ್ತಿ) ನಡೆಸಿಕೊಂಡು ಬರುತಿದ್ದಾರೆ. ಕಮಲಶಿಲೆ ದೇವಸ್ಥಾನಕ್ಕೂ ಗುಪ್ಪಿ ಗುಹಾಲಯಕ್ಕೂ ಚಾರಿತ್ರಿಕವಾದ ಸಂಬಂಧವಿದ್ದರೂ ವ್ಯಾವಹಾರಿಕವಾಗಿ ಮತ್ತು ಪೂಜಾವಿಧಿ ವಿಧಾನದಲ್ಲಿ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಭಕ್ತರ ಸಂಖ್ಯೆ ವೃದ್ಧಿ: ಈ ಗುಪ್ಪಿ ಗುಹಾಲಯದ ನಿರ್ವಹಣೆಯನ್ನು ನೋಡಿ ಕೊಂಡು ಬರುತ್ತಿರುವ ಜೋಗಿ ಕುಟುಂಬ, ಪಕ್ಕದಲ್ಲಿರುವ ಹುಲಿ ಆಶ್ರಯ ತಾಣಕ್ಕೆ ಅಗ್ಗಿಷ್ಠಿಕೆ ಹಾಕಿ ದಿನನಿತ್ಯ ನೇಮ ನಿಷ್ಠ್ಠೆಯಿಂದ ಆರಾಧನೆಯಲ್ಲಿ ತೊಡ ಗಿತ್ತು. ಈಗ ಬಸವ ಜೋಗಿ ಕುಟುಂಬವೂ ಈ ಕಾಯಕವನ್ನು ಮುನ್ನಡೆಸುತ್ತಿದೆ. ಇತ್ತೀಚಿಗೆ ಈ ಗುಹಾಲಯದ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರಗೊಂಡ ಹಿನ್ನೆಲೆ ಯಲ್ಲಿ ಇಲ್ಲಿಗೆ ಬರುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ವೃದ್ಧಿಯಾಯಿತು. ಹೀಗೆ ಬರುವ ಭಕ್ತರನ್ನು ಜೋಗಿ ಕುಟುಂಬ ಗುಹೆ ಒಳಗೆ ಕರೆದುಕೊಂಡು ಹೋಗಿ ತೋರಿಸುತ್ತಿತ್ತು. ಇದು ಜೋಗಿ ಕುಟುಂಬಕ್ಕೆ ಪ್ರಮುಖ ಆದಾಯದ ಮೂಲವಾಗಿದೆ ಎಂದು ಕೇಶವ ಕೋಟೇಶ್ವರ ತಿಳಿಸಿದರು.

ಈ ಗುಹಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಶ್ರೀಕ್ಷೇತ್ರ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ‘ದೇವಳದ ಜೀರ್ಣೋದ್ಧಾರಕ್ಕೆ’ ಎಂಬ ಫಲಕದೊಂದಿಗೆ ಹುಂಡಿಯೊಂದನ್ನು ಗುಪ್ಪಿ ಗುಹಾ ಲಯದ ಒಳಗೆ ಪ್ರತಿಷ್ಠಾಪಿಸಿತು. ಅಲ್ಲದೆ ಇತ್ತೀಚೆಗೆ ಆಡಳಿತ ಮಂಡಳಿ ಗುಹಾಲಯ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡಲು ದೇವಸ್ಥಾನದ ವತಿಯಿಂದ ಕಾರ್ಯಕರ್ತರನ್ನು ನೇಮಕ ಮಾಡಿತು. ಇದರಿಂದ ಜೋಗಿ ಕುಟುಂಬದ ಆದಾಯ ಮೂಲಕ್ಕೆ ದೊಡ್ಡ ಹೊಡೆತ ಬಿತ್ತು ಎಂದು ಅವರು ದೂರಿದರು. ಇದನ್ನು ಸಂಬಂಧಿಸಿದವರಲ್ಲಿ ಪ್ರಶ್ನಿಸಲು ಹೋದರೆ ಸೌಹಾರ್ದತೆ ಮಾತುಕತೆ ಯಿಂದ ಪ್ರಕರಣ ಬಗೆಹರಿಸುವ ಬದಲು ಜೋಗಿ ಕುಟುಂಬದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಯಿತು. ಈ ಕುರಿತು ಅಧಿಕಾರಿಗಳು, ಜನಪ್ರತಿ ನಿಧಿಗಳ ಬಳಿ ತೆರಳಿದರೂ ಜೋಗಿ ಕುಟುಂಬಕ್ಕೆ ಯಾವುದೇ ನ್ಯಾಯ ಸಿಗಲಿಲ್ಲ. ಇದು ನಮ್ಮ ಸಮುದಾಯದ ಕುಟುಂಬದ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರವಾಗಿರುವುದರಿಂದ ಇದರ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶೇಖರ್ ಬಳೆಗಾರ್, ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಶಿವರಾಮ ಬಳೆಗಾರ, ದಯಾನಂದ ಜೋಗಿ, ಕೃಷ್ಣಯ್ಯ ಜೋಗಿ, ರಾಘವೇಂದ್ರ ಜೋಗಿ ಮೊದಲಾದವರು ಉಪಸ್ಥಿತರಿದ್ದರು.

ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ಗುಪ್ಪಿ:-  ಗುಹಾಲಯದಲ್ಲಿ ಜೋಗಿಗಳ ಧಾರ್ಮಿಕ ಹಕ್ಕಿನ ಮರುಸ್ಥಾಪನೆಯಾಗ ಬೇಕು ಮತ್ತು ಪೂಜಾ ಹಕ್ಕನ್ನು ಮರಳಿಸಬೇಕು. ಗುಹಾಲಯದ ಒಳಗೆ ಕಮಲ ಶಿಲೆ ದೇವಸ್ಥಾನದ ವತಿಯಿಂದ ಇಡಲಾದ ಹುಂಡಿಯನ್ನು ತೆರವುಗೊಳಿಸ ಬೇಕು. ದೇವಸ್ಥಾನದ ಆಡಳಿತ ಮಂಡಳಿ ನಡೆಸುವ ದಬ್ಬಾಳಿಕೆಯನ್ನು ಕೊನೆ ಗೊಳ್ಳಬೇಕು. ದೇವಸ್ಥಾನದಿಂದ ಗುಹಾಲಯಕ್ಕೆ ಮಾರ್ಗದರ್ಶಕರನ್ನು ನೇಮಿಸುವು ದನ್ನು ನಿಲ್ಲಿಸಬೇಕು ಎಂದು ಕೇಶವ ಕೋಟೇಶ್ವರ ಒತ್ತಾಯಿಸಿದರು.

ಈ ಬೇಡಿಕೆ ಈಡೇರದಿದ್ದರೆ ನವನಾಥ ಪಂಥದ ಜೋಗಿಗಳ ಧಾರ್ಮಿಕ ಹಕ್ಕಿನ ಮರುಸ್ಥಾಪನೆಗಾಗಿ ಉಗ್ರ ಹೋರಾಟ ನಡೆಸಲಾಗುವುದು. ಅದೇ ರೀತಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲು ಕೂಡ ನಿರ್ಧ ರಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News