×
Ad

ಗುಜರಾತ್‌ನಲ್ಲಿ ಪ್ರವಾಹದ ರುದ್ರನರ್ತನ: ಸಾವಿನ ಸಂಖ್ಯೆ 111ಕ್ಕೇರಿಕೆ

Update: 2017-07-26 19:35 IST

ಅಹ್ಮದಾಬಾದ್,ಜು.26: ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ರುದ್ರನರ್ತನಕ್ಕೆ ಸಾಕ್ಷಿಯಾಗಿರುವ ಗುಜರಾತ್‌ನಲ್ಲಿ ಬುಧವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಇದೇ ವೇಳೆ ಪ್ರವಾಹದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಬನಾಸಕಾಂತಾ ಜಿಲ್ಲೆಯಲ್ಲಿ ನೆರೆನೀರಿನ ಪ್ರಮಾಣ ತಗ್ಗುವುದರೊಂದಿಗೆ ಕಂಕ್ರೆಜ್ ತಾಲೂಕಿನ ಖೈರಿಯಾ ಗ್ರಾಮದಲ್ಲಿ ಭಾರೀ ದುರಂತವೊಂದು ಬೆಳಕಿಗೆ ಬಂದಿದೆ. ಬನಾಸ್ ನದಿಯ ದಂಡೆಯಲ್ಲಿ ಒಂದೇ ಕುಟುಂಬದ 17 ಜನರ ಶವಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯಕರ್ತರು ಕೆಸರಿನಲ್ಲಿ ಹೂತು ಹೋಗಿದ್ದ ಶವಗಳನ್ನು ಒಂದೊಂದಾಗಿ ಹೊರತೆಗೆಯುತ್ತಿದ್ದರೆ ಗ್ರಾಮಸ್ಥರಿಗೆ ಕಣ್ಣೆದುರಿನ ದೃಶ್ಯವನ್ನೇ ನಂಬಲು ಸಾಧ್ಯವಾಗಿರಲಿಲ್ಲ.

ನೆರೆ ನೀರಿನ ಮಟ್ಟ ತಗ್ಗುತ್ತಿರುವುದರಿಂದ ಕಳೆದ ಮೂರು ದಿನಗಳಲ್ಲಿ ಕೊಚ್ಚಿಕೊಂಡು ಹೋಗಿರುವ ಇನ್ನಷ್ಟು ಜನರ ಶವಗಳು ಪತ್ತೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದವು. ತನ್ಮಧ್ಯೆ ಮಂಗಳವಾರ ರಾತ್ರಿಯಿಂದೀಚೆಗೆ ರಕ್ಷಣಾ ಕಾರ್ಯಕರ್ತರ ಶೋಧ ಕಾರ್ಯಾಚರಣೆಯಲ್ಲಿ ಇತರ 12 ಜನರ ಶವಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಮಳೆಯ ಭೀಕರತೆಗೆ ಬಲಿಯಾದವರ ಒಟ್ಟು ಸಂಖ್ಯೆ 111ಕ್ಕೇರಿದೆ.

ಸೇನೆ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ ಮತ್ತು ಬಿಎಸ್‌ಎಫ್‌ನ ತಂಡಗಳು ಬನಾಸಕಾಂತಾ ಮತ್ತು ಇತರೆಡೆಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಸಹಕರಿಸುತ್ತಿವೆ. ಬುಧವಾರ ಬನಾಸಕಾಂತಾ ಜಿಲ್ಲೆಯೊಂದರಲ್ಲೇ ಸುಮಾರು 460 ಜನರನ್ನು ರಕ್ಷಿಸಲಾಗಿದೆ. ಪ್ರವಾಹಪೀಡಿತವಾಗಿರುವ ನೆರೆಯ ಪಟನ್ ಜಿಲ್ಲೆಯಲ್ಲಿಯೂ ಭರದಿಂದ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಹಬ್ಬದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಕ್ಲೋರಿನ್ ಮಾತ್ರೆಗಳು, ಒಆರ್‌ಎಸ್ ಪ್ಯಾಕೆಟ್‌ಗಳನ್ನು ಜನರಿಗೆ ವಿತರಿಸಲಾಗುತ್ತಿದೆ. ವೈದ್ಯರೂ ಸೇರಿದಂತೆ 500ಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News