ಅಮೆರಿಕ: ಇರಾನ್, ಉ.ಕೊರಿಯ, ರಶ್ಯ ವಿರುದ್ಧ ದಿಗ್ಬಂಧನಕ್ಕೆ ಸದನ ಒಪ್ಪಿಗೆ

Update: 2017-07-26 17:09 GMT

ವಾಶಿಂಗ್ಟನ್, ಜು. 26: ಇರಾನ್, ಉತ್ತರ ಕೊರಿಯ ಮತ್ತು ರಶ್ಯಗಳ ವಿರುದ್ಧ ಹೊಸದಾಗಿ ದಿಗ್ಬಂಧನಗಳನ್ನು ವಿಧಿಸುವ ಪ್ರಸ್ತಾಪಕ್ಕೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಭಾರೀ ಬಹುಮತದಿಂದ ಅನುಮೋದನೆ ನೀಡಿದೆ.

 ಈ ಬೆಳವಣಿಗೆಯು, ದಿಗ್ಬಂಧನಗಳನ್ನು ರದ್ದುಗೊಳಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಧಿಕಾರವನ್ನು ಗಣನೀಯವಾಗಿ ಕುಗ್ಗಿಸುತ್ತದೆ.

ಈ ಪ್ರಸ್ತಾಪವು ‘‘ಅಮೆರಿಕನ್ನರನ್ನು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ನಮ್ಮ ಅತ್ಯಂತ ಅಪಾಯಕಾರಿ ವಿರೋಧಿಗಳನ್ನು ಹದ್ದುಬಸ್ತಿನಲ್ಲಿಡುತ್ತದೆ’’ ಎಂದು ಹೌಸ್ ಸ್ಪೀಕರ್ ಪೌಲ್ ರಯನ್ ಮತದಾನದ ಬಳಿಕ ಹೇಳಿದರು.

ನಿರ್ಣಯವು 419-3 ಮತಗಳ ಅಂತರದಿಂದ ಅಂಗೀಕಾರಗೊಂಡಿದೆ.

ಈ ನಿರ್ಣಯವು ಇನ್ನು ಸೆನೆಟ್‌ಗೆ ಹೋಗುತ್ತದೆ. ಸೆನೆಟ್‌ನಲ್ಲಿ ದಿಗ್ಬಂಧನಕ್ಕೆ ಬೆಂಬಲವಿದೆಯಾದರೂ, ಉತ್ತರ ಕೊರಿಯಕ್ಕೆ ದಂಡ ವಿಧಿಸಬೇಕೇ ಎಂಬ ಬಗ್ಗೆ ಚರ್ಚೆ ನಡೆಯಲಿದೆ.

ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ಕಳೆದ ವಾರ ರಾಜಿ ಸೂತ್ರ ಏರ್ಪಟ್ಟ ಬಳಿಕ ಈ ನಿರ್ಣಯವನ್ನು ಮಂಡಿಸಲಾಗಿದೆ. 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿರುವ ಹಾಗೂ ಯುಕ್ರೇನ್ ದೇಶದ ರಾಜ್ಯ ಕ್ರೈಮಿಯವನ್ನು ತನ್ನೊಂದಿಗೆ ವಿಲೀನಗೊಳಿಸಿಕೊಂಡಿರುವ ರಶ್ಯವನ್ನು ಶಿಕ್ಷಿಸುವುದಕ್ಕಾಗಿ ಅಮೆರಿಕದ ಶಾಸನ ಸಭೆ ಈ ಮಹತ್ವದ ಕ್ರಮವನ್ನು ತೆಗೆದುಕೊಂಡಿದೆ.

ದಿಗ್ಬಂಧನಕ್ಕೆ ಇರಾನ್ ಪ್ರತಿಕ್ರಿಯೆ ಖಚಿತ: ಇರಾನ್ ಉಪ ವಿದೇಶ ಸಚಿವ

ಅಮೆರಿಕವು ಹೊಸ ದಿಗ್ಬಂಧನಗಳನ್ನು ವಿಧಿಸಿದರೆ ಇರಾನ್ ಪ್ರತಿಕ್ರಿಯಿಸುವುದು ಎಂದು ಇರಾನ್ ಉಪ ವಿದೇಶ ಸಚಿವ ಅಬ್ಬಾಸ್ ಅರಾಕ್ಚಿ ಬುಧವಾರ ಹೇಳಿದ್ದಾರೆ ಎಂದು ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜನ್ಸಿ (ಇರ್ನ) ವರದಿ ಮಾಡಿದೆ.

 ‘‘ಅಮೆರಿಕದ ಸಂಸತ್ತಿನಲ್ಲಿ ಹೊಸ ದಿಗ್ಬಂಧನೆಗಳ ಬಗ್ಗೆ ಚರ್ಚೆಯಾಗುತ್ತಿರುವುದು ಸ್ಪಷ್ಟವಾಗಿ ಪ್ರತಿಕೂಲ ವಿದ್ಯಮಾನವಾಗಿದೆ ಹಾಗೂ ಅದು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ವಿರುದ್ಧವಾಗಿದೆ. ಅದಕ್ಕೆ ಖಂಡಿತವಾಗಿಯೂ ಪ್ರತಿಕ್ರಿಯಿ ಇರುತ್ತದೆ’’ ಎಂದು ಉನ್ನತ ಪರಮಾಣು ಸಂಧಾನಕಾರನೂ ಆಗಿರುವ ಅರಾಕ್ಚಿ ಹೇಳಿದರು.

ಆದರೆ, ಇರಾನ್ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದರ ವಿವರಗಳನ್ನು ಅವರು ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News