ಪೊಲೀಸರಿಂದ ಮೆರವಣಿಗೆಗೆ ತಡೆ: ರಸ್ತೆಯಲ್ಲಿ ಧರಣಿ ಕೂತ ಕಾರ್ಮಿಕರು

Update: 2017-07-26 15:12 GMT

ಉಡುಪಿ, ಜು.26: ಮರಳು ಸಮಸ್ಯೆ ಬಗೆಹರಿಸುವಂತೆ ಹಾಗೂ ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ (ಸಿಐಟಿಯು) ನೇತೃತ್ವದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಚಲೋ ಮೆರವಣಿಗೆಯನ್ನು ಪೊಲೀಸರು ಅರ್ಧದಲ್ಲೇ ತಡೆದಿದ್ದು, ಇದನ್ನು ವಿರೋಧಿಸಿ ಕಾರ್ಮಿಕರು ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರು.

ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್‌ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ 5,670 ಕೋಟಿ ರೂ. ನಲ್ಲಿ ಕಳೆದ 11ವರ್ಷಗಳಲ್ಲಿ ಕೇವಲ 177ಕೋಟಿ ರೂ. ಮಾತ್ರ ಬಳಕೆ ಮಾಡಲಾ ಗಿದೆ. ಮಂಡಳಿಯಲ್ಲಿರುವ ಹಣವನ್ನು ಸರಕಾರ ಅಪೆಕ್ಸ್ ಬ್ಯಾಂಕಿಗೆ ವರ್ಗಾಯಿಸಲು ಯೋಜನೆ ಹಾಕಿಕೊಂಡಿದೆ. ಆದರೆ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಕ್ಲಾಕ್ ಟವರ್‌ನಿಂದ ಜೋಡುಕಟ್ಟೆಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಮೆರವಣಿಗೆಯಲ್ಲಿ ಹೊರಟ ಸಾವಿರಾರು ಸಂಖ್ಯೆಯ ಕಾರ್ಮಿಕ ರನ್ನು ಪೊಲೀಸರು ಡಯಾನ ಸರ್ಕಲ್‌ನಲ್ಲಿ ಬ್ಯಾರಿಕೇಡ್ ಹಾಕಿ ತಡೆದರು.

ಪ್ರತಿಭಟನಕಾರರು ಸಚಿವರ ಕಚೇರಿಗೆ ತೆರಳಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು. ಆದರೆ ಪೊಲೀಸರು ಅವಕಾಶ ನಿರಾಕರಿಸಿದರು. ಇದನ್ನು ವಿರೋಧಿಸಿ ಪ್ರತಿಭಟನಕಾರರು ರಸ್ತೆಯಲ್ಲೇ ಕುಳಿತು ಧರಣಿ ನಡೆಸಿ ಘೋಷಣೆಗಳನ್ನು ಕೂಗಿದರು.

ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಭಟನಕಾರರಿಂದ ಮನವಿಯನ್ನು ಸ್ವೀಕರಿಸಿದರು. ಜಿಲ್ಲೆಯ ಮರಳು ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಮತ್ತು ಅದರ ಬೆಲೆ ನಿಯಂತ್ರಿಸಬೇಕು. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದ ಣಿಯಾಗಿರುವ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಸೌಲಭ್ಯಗಳನ್ನು ನೀಡಬೇಕು ಮತ್ತು ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ನೋಂದಣಿ ಹಾಗೂ ನವೀಕರಣ ಆನ್‌ಲೈನ್ ಕೂಡಲೇ ಬಗೆಹರಿಸಬೇಕು. ಮಂಡಳಿ ಪುನರ್ ರಚನೆಯಲ್ಲಿ ಆಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು. ವಸತಿ ಸಹಿತ ಭವಿಷ್ಯನಿಧಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು. ಮಂಡಳಿ ಹಣವನ್ನು ಅನಾವಶ್ಯಕವಾಗಿ ದುಂದುವೆಚ್ಚ ಮಾಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ, ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಹಾಜರಿದ್ದರು. ಸಂಘದ ಅಧ್ಯಕ್ಷ ಶೇಖರ ಬಂಗೇರ, ಗೌರವಾಧ್ಯಕ್ಷ ದಯಾನಂದ ಕೋಟ್ಯಾನ್, ಕೋಶಾಧಿಕಾರಿ ಗಣೇಶ್ ನಾಯ್ಕ, ಕುಂದಾಪುರ ತಾಲೂಕು ಅಧ್ಯಕ್ಷ ದಾಸು ಭಂಡಾರಿ, ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ಕೋಶಾಧಿಕಾರಿ ಜಗದೀಶ್ ಆಚಾರ್ಯ, ಮುಖಂಡರಾದ ಕೆ.ಶಂಕರ್, ವಿಶ್ವ ನಾಥ ರೈ, ವಿಠಲ ಪೂಜಾರಿ, ಕವಿರಾಜ್, ವೆಂಕಟೇಶ್ ಕೋಣಿ, ಶೀಲಾವತಿ, ನಾಗರತ್ನ ಮೊದಲಾದವರು ಉಪಸ್ಥಿತರಿದ್ದರು.

ಆ.1ರಿಂದ ಮರಳುಗಾರಿಕೆಗೆ ಅವಕಾಶ: ಪ್ರಮೋದ್

 ಕರ್ನಾಟಕ ಕೋಸ್ಟಲ್ ರೆನ್ ಕಮಿಟಿಯು ಉಡುಪಿಯಲ್ಲೇ ಸಭೆ ನಡೆಸಿ ಸಿಆರ್‌ಝೆಡ್ ವ್ಯಾಪ್ತಿಯ 28 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಕಾನೂನು ಪ್ರಕಾರ ಹೊಸ ಪರವಾನಿಗೆ ನೀಡಲು ಆರಂಭಿಸಲಾಗುವುದು. ಈ ಮೂಲಕ ಆ.1ರಿಂದ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಮರಳು ಹೊರ ಜಿಲ್ಲೆಗೆ ಹೋಗದಂತೆ, ಹೊರರಾಜ್ಯ ಕಾರ್ಮಿಕರ ಬದಲು ಸ್ಥಳೀಯರಿಂದಲೇ ಮರಳು ತೆಗೆಸುವ ಮತ್ತು ಮರಳು ಸಾಗಾಟಕ್ಕೆ ಲಾರಿಗಳ ಬದಲು 407 ಟೆಂಪೋಗಳನ್ನು ಮಾತ್ರ ಉಪಯೋಗಿಸುವ ನಿಯಮ ವನ್ನು ಅಳವಡಿಸಲಾಗುವುದು. ಇದರಿಂದ ನಮ್ಮ ಜಿಲ್ಲೆಗೆ ಅತ್ಯಂತ ಕಡಿಮೆ ದರ ದಲ್ಲಿ ಹೇರಳವಾಗಿ ಮರಳು ಸಿಗುವಂತಾಗುತ್ತದೆ ಎಂದರು.

ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ವಿಚಾರದಲ್ಲಿ ಸಂಪುಟ ಉಪಸಮಿತಿ ಹಾಗೂ ಅಧಿಕಾರಿಗಳ ಮಧ್ಯೆ ಭಿನ್ನಾಭಿಪ್ರಾಯವಿದ್ದು, ಅದು ಬಗೆ ಹರಿದ ಕೂಡಲೇ ಅಲ್ಲಿಯೂ ಮರಳುಗಾರಿಕೆ ಆರಂಭಿಸಲಾಗುವುದು. ಕಟ್ಟಡ ಕಾರ್ಮಿಕರ ಮಂಡಳಿಗೆ ಸಂಬಂಧಿಸಿದ ಬೇಡಿಕೆಯನ್ನು ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News