ನಾನು ಲಿಂಗಾಯಿತ ಅಲ್ಲ, ಹಾಗಾಗಿ ನನಗೆ ಗೊತ್ತಿಲ್ಲ: ಪ್ರಮೋದ್‌

Update: 2017-07-26 15:16 GMT

ಉಡುಪಿ, ಜು. 26: ವೀರಶೈವ ಹಾಗೂ ಲಿಂಗಾಯಿತ ಧರ್ಮದ ವಿಚಾರ ನನಗೆ ಗೊತ್ತಿಲ್ಲ. ನಾನು ಲಿಂಗಾಯಿತ ಅಲ್ಲ. ನನಗೆ ಆ ಬಗ್ಗೆ ಸರಿಯಾದ ಜ್ಞಾನ ಇಲ್ಲ. ಅದು ಏನು ಸಮಸ್ಯೆ ಎಂಬುದು ಇನ್ನೂ ಅರ್ಥ ಆಗಿಲ್ಲ. ಅರ್ಥ ಆದಾಗ ಅದಕ್ಕೆ ಪ್ರತಿಕ್ರಿಯೆ ನೀಡುತ್ತೇನೆ. ನಾನು ಕಾನೂನು ಅಥವಾ ಕನ್ನಡ ಸಂಸ್ಕೃತಿ ಸಚಿವ ಅಲ್ಲ. ಹೀಗಾಗಿ ನನಗೂ ಅದಕ್ಕೂ ಏನು ಸಂಬಂಧ ಇಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜರಂಗದಳಕ್ಕೆ ಪರ್ಯಾಯವಾಗಿ ಅಹಿಂದವನ್ನು ಬೆಳೆಸುವು ದಾಗಿ ನೀಡಿದ ಹೇಳಿಕೆಯು ವೇಣುಗೋಪಾಲ್ ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡ ನಂತರ ಆಗಿರುವ ಬೆಳವಣಿಗೆಯೇ ಎಂಬ ಪ್ರಶ್ನೆಗೆ, ವೇಣುಗೋಪಾಲ್ ರಾಜ್ಯ ಉಸ್ತುವಾರಿ ವಹಿಸುವ ಮೊದಲೇ ನಮ್ಮ ಸರಕಾರ ಅಹಿಂದದ ಪರವಾಗಿತ್ತು. ಅಹಿಂದ ಅಂದರೆ ಈ ರಾಜ್ಯದ ಶೇ.70ರಷ್ಟಿರುವ ಬಹುಸಂಖ್ಯಾತರು. ಹಾಗೆ ನಾವು ಬಹುಸಂಖ್ಯಾತರ ಪರವಾಗಿದ್ದೇವೆ. ಅದರಲ್ಲಿ ಏನು ತಪ್ಪು ಎಂದು ಅವರು ಮರುಪ್ರಶ್ನಿಸಿದರು.

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಲಾಂಛನವನ್ನು ಲೋಗೋವಾಗಿ ಬಳಸಿದಲ್ಲದೆ, ಅದನ್ನು ನೆಲಕ್ಕೆ ಹಾಕಿರುವ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ನಾನು ಕಂಠೀರವ ಸ್ಟೇಡಿಯಂಗೆ ಹೋಗಿದ್ದೆ. ಆದರೆ ನನಗೆ ಅದು ರಾಷ್ಟ್ರೀಯ ಲಾಂಛನದ ಹಾಗೆ ಕಂಡಿಲ್ಲ. ಈಗ ಆ ವಿಚಾರವನ್ನು ಗಮನಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News