×
Ad

ಉದ್ಯಮ ಕ್ಷೇತ್ರದ ಸಾಧಕರಾಗಿ ಸಮಾಜದ ದುರ್ಬಲರಿಗೆ ನೆರವು ನೀಡಿ: ಯು.ಟಿ.ಖಾದರ್‌

Update: 2017-07-26 21:38 IST

ಮಂಗಳೂರು, ಜು. 26: ಉದ್ಯಮ ಕ್ಷೇತ್ರದಲ್ಲಿ ಪರಿಶ್ರಮ, ಪ್ರಾಮಾಣಿಕತನದೊಂದಿಗೆ ಸಾಧಕರಾಗಿ ಸಮಾಜದ ದುರ್ಬಲ ವರ್ಗದವರಿಗೆ ನೆರವು ನೀಡಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿಂದು ದ.ಕ, ಉಡುಪಿ ಸ್ಟೀಲ್ ಟ್ರೇಡರ್ಸ್‌ ಎಸೋಸಿಯೇಶನ್(ರಿ) ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಉದ್ಯಮಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವುದರೊಂದಿಗೆ ತಮ್ಮ ಸುತ್ತಮುತ್ತಲಿನ ಪ್ರದೇಶದ ಜನರಿಗೆ, ಪರಿಸರಕ್ಕೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುವುದು ಮುಖ್ಯ. ತಮ್ಮ ಪರಿಸರದ ಜನರಿಗೆ ಶಿಕ್ಷಣ, ಆರೋಗ್ಯ, ಇತರ ಸಾಮಾಜಿಕ ನೆರವು, ಉದ್ಯೋಗ ನೆರವು ನೀಡಿದರೆ ಆ ಉದ್ಯಮವನ್ನು ಅಲ್ಲಿನ ಸ್ಥಳೀಯರು ಸ್ವಾಗತಿಸುತ್ತಾರೆ. ಜಿಲ್ಲೆಯ ಎಂಆರ್‌ಪಿಎಲ್ ನಂತಹ ಸಂಸ್ಥೆಗಳು ಈ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ .ಈ ನಿಟ್ಟಿನಲ್ಲಿ ಜೆಎಸ್‌ಡಬ್ಲ್ಯೂ  ಸಂಸ್ಥೆ ಮಾದರಿಯಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿ ದ.ಕ-ಉಡುಪಿ ಜಿಲ್ಲೆಯ ಈ ಉಕ್ಕಿನ ಉದ್ಯಮಿಗಳ ಸಂಘಟನೆ ರಾಷ್ಟ್ರಮಟ್ಟದ ಸಂಘಟನೆಯಾಗಿ ಬೆಳೆಯಲಿ ಎಂದು ಯು.ಟಿ.ಖಾದರ್ ಶುಭ ಹಾರೈಸಿದರು.

ಸಮಾರಂಭದಲ್ಲಿ ಸಂಘಟನೆಯ ಅಧ್ಯಕ್ಷ ಮನ್ಸೂರ್ ಅಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ದ.ಕ ಉಡುಪಿ ಜಿಲ್ಲೆಯನ್ನೊಳಗೊಂಡ ಉಕ್ಕಿನ ಉದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ತರುವ ನಿಟ್ಟಿನಲ್ಲಿ ಮತ್ತು ಪರಸ್ಪರ ಸಹಕಾರ ಮಾಡುವ ನಿಟ್ಟಿನಲ್ಲಿ ಈ ಸಂಘಟನೆಯನ್ನು ಆರಂಭಿಸಲಾಗಿದೆ. ಉದ್ಯಮ ಕ್ಷೇತ್ರದಲ್ಲಿ ಸಂಘಟಿತ ಪ್ರಯತ್ನ ದೊಂದಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸಂಘಟನೆಯನ್ನು ನೋಂದಾಯಿಸ ಲಾಗಿದೆ ಎಂದು ಮನ್ಸೂರ್ ಅಹಮ್ಮದ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೀವನ್ ಸಲ್ದಾನಾ, ವಾಣಿಜ್ಯ ತೆರಿಗೆ ಇಲಾಖೆಗೆ ಜಂಟಿ ಆಯುಕ್ತರಾದ ಎಚ್.ಜಿ. ಪವಿತ್ರ, ಹೇಮ ಜಿ.ನಾಯಕ್, ವಾಣಿಜ್ಯ ತೆರಿಗೆ ಅಧಿಕಾರಿ ಸಂಜೀವ್ ಬಲಿಪ, ಉಪಾಧ್ಯಕ್ಷ ಪಿ. ಬಾಲಕೃಷ್ಣ ಶೆಣೈ, ಕಾರ್ಯದರ್ಶಿ ಮನೋಜ್ ಕುಮಾರ್, ಖಜಾಂಜಿ ರಾಕೇಶ್ ಕೋಟ್ಯಾನ್ ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ ರಾಯ್ ರೋಡ್ರಿಗಸ್, ಉಡುಪಿ ಅಜ್ಮಲ್ ಅಸ್ಸಾದಿ, ಶಾನ್‌ಫಾತ್ ಶರೀಫ್, ರಾಮಚಂದ್ರ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಬಿಂಬಾ ಮನೋಜ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News