ಬಂಧಿತ ಶಿವಸೇನಾ ನಾಯಕ ಅಕ್ರಮ ನಿರ್ಮಾಣ ಪ್ರಕರಣಗಳ ಸರದಾರ

Update: 2017-07-26 16:43 GMT

ಮುಂಬೈ,ಜು.26: ಉಪನಗರ ಘಾಟಕೋಪರ್‌ನಲ್ಲಿ ಐದಂತಸ್ತಿನ ಕಟ್ಟಡ ಸಿದ್ಧಿ ಸಾಯಿ ಕುಸಿತಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಶಿವಸೇನಾ ನಾಯಕ ಸುನಿಲ ಸಿತಪ್ ಆ ಪ್ರದೇಶದಲ್ಲಿ ಆರು ಅಕ್ರಮ ನಿರ್ಮಾಣ ಪ್ರಕರಣಗಳಲ್ಲಿ ಹೆಸರಿಸಲ್ಪಟ್ಟಿದ್ದಾರೆ ಎಂದು ಸ್ಥಳೀಯ ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಪ್ರವೀಣ ಛೆಡ್ಡಾ ಆರೋಪಿಸಿದ್ದಾರೆ.

ಸಿತಪ್‌ರನ್ನು ಮಂಗಳವಾರ ರಾತ್ರಿ ಬಂಧಿಸಿದ್ದು, ಬುಧವಾರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಅವರಿಗ ಏಳು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಲಾಗಿದೆ.

ಘಾಟಕೋಪರ್‌ನ ಸಾಯಿನಾಥ ನಗರದಲ್ಲಿ ಮನೋರಂಜನಾ ಉದ್ದೇಶಗಳಿಗಾಗಿ ಮೀಸಲಿಟ್ಟಿರುವ 25,000 ಚದುರಡಿ ಜಾಗದಲ್ಲಿ ಅಕ್ರಮ ನಿರ್ಮಾಣಕ್ಕಾಗಿ ಸಿತಪ್ ಹುನ್ನಾರ ನಡೆಸಿದ್ದು, ತಾನದನ್ನು ಆಕ್ಷೇಪಿಸಿದ್ದೆ ಮತ್ತು ಆ ಬಗ್ಗೆ ಮುನಸಿಪಲ್ ಆಯುಕ್ತ ಅಜಯ ಮೆಹತಾ ಅವರ ಗಮನ ಸೆಳೆದಿದ್ದೆ ಹಾಗೂ ಅವರು ವಿಚಾರಣೆಗೆ ಆದೇಶಿಸಿದ್ದರು. ಪರಿಣಾಮವಾಗಿ ಆಗ ಸಹಾಯಕ ಆಯುಕ್ತ ಸುಧಾಂಷು ದ್ವಿವೇದಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು ಎಂದು ಛೆಡ್ಡಾ ಹೇಳಿದರು.

ಸಿತಪ್ ಭೂಕಬಳಿಕೆ ಮತ್ತು ಅಕ್ರಮ ನಿರ್ಮಾಣಗಳಲ್ಲಿ ನಿಷ್ಣಾತರಾಗಿದ್ದಾರೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸುವಲ್ಲಿ ಪಳಗಿದ್ದಾರೆ ಎಂದೂ ಛೆಡ್ಡಾ ತಿಳಿಸಿದರು.

ಮಂಗಳವಾರ ಕುಸಿದು ಬಿದ್ದ ಘಾಟಕೋಪರ್ ಕಟ್ಟಡವು 17 ಜೀವಗಳನ್ನು ಬಲಿ ತೆಗೆದುಕೊಂಡಿದೆ. 2009ರಲ್ಲಿ ಸಿತಪ್ ವಾಣಿಜ್ಯಿಕ ಬಳಕೆಗಾಗಿ ಕಟ್ಟಡದ ಪರಿವರ್ತನೆಗೆ ಮತ್ತು ಅದರ ನೆಲ ಅಂತಸ್ತಿನಲ್ಲಿ ಆಸ್ಪತ್ರೆಯ ಆರಂಭಕ್ಕೆ ಮುಂದಾದಾಗಲೇ ಕಟ್ಟಡದ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

ಆಸ್ಪತ್ರೆಯನ್ನು ಗೆಸ್ಟ್‌ಹೌಸ್ ಆಗಿ ಪರಿವರ್ತಿಸಲು ಸಿತಪ್ ಯೋಜಿಸಿದ್ದರು ಎಂದು ನಿವಾಸಿಗಳು ತಿಳಿಸಿದ್ದಾರೆ. ಅದಕ್ಕಾಗಿ ಕೈಗೊಂಡಿದ್ದ ನವೀಕರಣ ಕಾಮಗಾರಿಯು ಕಟ್ಟಡವನ್ನು ದುರ್ಬಲಗೊಳಿಸಿದ್ದು, ಇದು ಅದು ಕುಸಿದು ಬೀಳಲು ಕಾರಣವಾಯಿತು ಎಂದು ಅವರು ಆರೋಪಿಸಿದ್ದಾರೆ. ಸಿತಪ್ ಘಾಟಕೋಪರ್ ಮತ್ತು ಪೊವಾಯಿಗಳಲ್ಲಿ ಕನಿಷ್ಠ ನಾಲ್ಕು ಮಳಿಗೆಗಳು ಮತ್ತು ಹೋಟೆಲ್‌ಗಳನ್ನು ಹೊಂದಿದ್ದಾರೆ.

ಶಿವಸೇನೆ ಸಿತಪ್‌ರಿಂದ ಅಂತರವನ್ನು ಕಾಯ್ದುಕೊಂಡಿದೆ. ಅವರು ಪಕ್ಷದಿಂದ ಪಕ್ಷಕ್ಕೆ ಹಾರುವ ವ್ಯಕ್ತಿ, ಶಿವಸೇನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ನಮಗೆ ಒಬಿಸಿ ಅಭ್ಯರ್ಥಿ ಬೇಕಾಗಿದ್ದರಿಂದ ಅವರ ಪತ್ನಿಗೆ ಟಿಕೆಟ್ ನೀಡಿದ್ದೆವು. ಚುನಾವಣೆಯ ಬಳಿಕ ಅವರು ನಮ್ಮ ಕಚೇರಿಗೆ ಭೇಟಿ ನೀಡಿಲ್ಲ, ಶಿವಸೇನೆಯೊಂದಿಗೂ ಸಂಪರ್ಕವಿಟ್ಟುಕೊಂಡಿಲ್ಲ ಎಂದು ಘಾಟಕೋಪರ್ ವಿಭಾಗ ಪ್ರಮುಖ ರಾಜೇಂದ್ರ ರಾವುತ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News