ಮನೋವೈದ್ಯ ಶಾಸ್ತ್ರದ ಭಾರತೀಯ ಇತಿಹಾಸ ಆರಂಭಗೊಂಡಿದ್ದು ಕೃಷ್ಣ ಮತ್ತು ಗೀತಾದಿಂದ:ಐಎಂಎ ಅಧ್ಯಕ್ಷ ಕೆ.ಕೆ.ಅಗರವಾಲ್
ಹೊಸದಿಲ್ಲಿ,ಜು.26: ಮಹಾಭಾರತವು ಮನೋವೈದ್ಯ ಶಾಸ್ತ್ರದ ವಿವಿಧ ಆಯಾಮಗಳ ವಿಷಯಗಳ ಸೂಚಕಗಳಿಂದ ಕೂಡಿದ್ದು, ಹಲವಾರು ಉತ್ತರಗಳನ್ನು ಒದಗಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ರಾಷ್ಟ್ರೀಯ ಅಧ್ಯಕ್ಷ ಕೆ.ಕೆ. ಅಗರವಾಲ್ ಅಭಿಪ್ರಾಯಿಸಿದ್ದಾರೆ. ಶ್ರೀಕೃಷ್ಣ ಅತ್ಯಂತ ಹೆಸರಾಂತ ಮಾರ್ಗದರ್ಶಕನಾಗಿದ್ದ ಎಂದು ಅವರು ಪರಿಗಣಿಸಿದ್ದಾರೆ.
ನಿಜವಾದ ಅರ್ಥದಲ್ಲಿ ಶ್ರೀಕೃಷ್ಣ ಮೊದಲ ಮತ್ತು ಬಹುಶಃ ಅತ್ಯಂತ ಹೆಸರಾಂತ ಮನಃಶಾಸ್ತ್ರಜ್ಞನಾಗಿದ್ದು, ಆತ ತನ್ನ ‘ರೋಗಿ’ ಅರ್ಜುನನಿಗೆ ನೀಡಿದ್ದ ಸಲಹೆ ಆತ ಅದ್ಭುತವಾಗಿ ಚೇತರಿಸಿಕೊಳ್ಳುವಂತೆ ಮಾಡಿತ್ತಲ್ಲದೆ, ಅದು ಅತ್ಯಂತ ಪೂಜನೀಯ ಗ್ರಂಥಗಳಲ್ಲೊಂದಾದ 700 ಶ್ಲೋಕಗಳ ಭಗವದ್ಗೀತೆಯ ಸೃಷ್ಟಿಗೂ ಕಾರಣವಾಗಿತ್ತು ಎನ್ನುತ್ತಾರೆ ಅಗರವಾಲ್.
18 ದಿನಗಳ ಮಹಾಭಾರತ ಯುದ್ಧಕ್ಕೆ ಮುನ್ನ ಅರ್ಜುನನಿಗೆ ಶ್ರೀಕೃಷ್ಣನ ಯಶಸ್ವಿ ಮಾರ್ಗದರ್ಶನದೊಂದಿಗೆ ಭಾರತದಲ್ಲಿ ಮನೋವೈದ್ಯ ಶಾಸ್ತ್ರದ ಇತಿಹಾಸ ಆರಂಭ ಗೊಂಡಿತ್ತು ಎಂದು ಅವರು ಮಾನಸಿಕ ಆರೋಗ್ಯದ ಬಗ್ಗೆ ಲೇಖನಗಳನ್ನು ಪ್ರಕಟಿಸುತ್ತಿರುವ ಈಕ್ವೇಟರ್ ಲೈನ್ ಮ್ಯಾಗಝಿನ್ ‘ಕೌವೆಬ್ಸ್ ಇನ್‌ಸೈಡ್ ಅಸ್’ನ ಇತ್ತೀಚಿನ ಸಂಚಿಕೆಯಲ್ಲಿ ಬರೆದಿದ್ದಾರೆ.
ಮಾನಸಿಕ ರೋಗಗಳಿಗೆ ಮದ್ದು ಅಥವಾ ಮಾನಸಿಕ ಆರೋಗ್ಯ ತಜ್ಞರು ಲಭ್ಯವಿಲ್ಲದಿದ್ದ ಕಾಲದಲ್ಲಿ ಮಹಾಭಾರತವು ಪ್ರಾಚೀನ ಭಾರತೀಯರ ಕೆಲವು ಪ್ರಶ್ನೆಗಳಿಗೆ ಉತ್ತರ ಒದಗಿಸಿದ್ದಂತೆ ಕಂಡು ಬರುತ್ತಿದೆ ಎಂದು ‘ವೇದಕಾಲದಲ್ಲಿ ಮಾನಸಿಕ ಚಿಕಿತ್ಸೆ’ ಶೀರ್ಷಿಕೆಯ ತನ್ನ ಲೇಖನದಲ್ಲಿ ಅಗರವಾಲ್ ಹೇಳಿದ್ದಾರೆ.
ವೇದಕಾಲದ ಭಾರತೀಯರಿಗೆ ಖನ್ನತೆ ಪ್ರತಿರೋಧಕಗಳ ಬಗ್ಗೆ ಗೊತ್ತಿರಲಿಲ್ಲ. ಆದರೆ ಅದು ನದಿ ದಡಗಳಲ್ಲಿ ಕಾಡುಗಳಿದ್ದ, ಸುತ್ತುಮುತ್ತಲೂ ಜಿಂಕೆಗಳು ಸ್ವಚ್ಛಂದವಾಗಿ ವಿಹರಿಸು ತ್ತಿದ್ದ, ಹಳ್ಳಿಗಳ ಅಂಚುಗಳಲ್ಲಿ ನವಿಲುಗಳು ಮೈಮರೆತು ನರ್ತಿಸುತ್ತಿದ್ದ ಕಾಲವಾಗಿತ್ತು ಮತ್ತು ಆ ಸುಂದರ ನಿಸರ್ಗ ತನ್ನದೇ ಆದ ರೀತಿಯಲ್ಲಿ ಮಾನವನ ಘಾಸಿಗೊಂಡ ಮನಸ್ಸಿಗೆ ಶಮನ ನೀಡುತ್ತಿತ್ತು. ಇಂದು ಮಾನಸಿಕ ಆರೋಗ್ಯಕ್ಕೆ ಪೋಷಣೆ ನೀಡುವ ಬಗೆಬಗೆಯ ಔಷಧಿಗಳಿವೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ವೈದ್ಯರು ಶಿಫಾರಸು ಮಾಡುವ ಔಷಧಿಗಳು ವಿಭಿನ್ನವಾಗಿರುತ್ತವೆ ಎಂದಿರುವ ಅಗರವಾಲ್, ಮಾನಸಿಕ ಆರೋಗ್ಯ ಕುರಿತ ವೈದಿಕ ಚಿಕಿತ್ಸೆ ಮನಸ್ಸು, ಬುದ್ಧಿಮತ್ತೆ ಮತ್ತು ಪ್ರತಿಷ್ಠೆಯ ನಿಯಂತ್ರಣದ ಮೇಲೆ ಗಮನ ನೀಡುತ್ತದೆ ಎಂದಿದ್ದಾರೆ.
ಈಶ್ವರ ಕ್ರೋಧವನ್ನು ನಿಭಾಯಿಸುವ ಅತ್ಯಂತ ವೈದಿಕ ವಿಧಾನಕ್ಕೆ ಮಾದರಿಯಾಗಿದ್ದಾನೆ. ನಿಮ್ಮಲ್ಲಿ ಅಸಮಾಧಾನಗಳಿದ್ದರೆ ನಕಾರಾತ್ಮಕ ಭಾವನೆಗಳನ್ನು ನಿಮ್ಮ ಗಂಟಲಿನಲ್ಲಿಯೇ ಹಿಡಿದಿಟ್ಟುಕೊಳ್ಳಿ ಮತ್ತು ಶಾಂತಚಿತ್ತದಿಂದ ವಿಷಯದ ಬಗ್ಗೆ ಯೋಚಿಸಿ ಎಂದು ಅಗರವಾಲ್ ಬರೆದಿದ್ದಾರೆ.