ಸಂಘ ಪರಿವಾರದ ಮುಖಂಡರಿಗೆ ನಿರೀಕ್ಷಣಾ ಜಾಮೀನು
ಮಂಗಳೂರು, ಜು.26: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳರ ಶವಯಾತ್ರೆಯ ವೇಳೆ ಕಲ್ಲು ತೂರಾಟ ಹಾಗೂ ಗಲಭೆಗೆ ಪಿತೂರಿ ನಡೆಸಿದ್ದಾರೆಂದು ಆರೋಪ ಎದುರಿಸುತ್ತಿದ್ದ ಬಿಜೆಪಿ ಹಾಗೂ ಸಂಘ ಪರಿವಾರದ ಐವರು ಮುಖಂಡರಿಗೆ ಮಂಗಳೂರು ನಾಲ್ಕನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬಿಜೆಪಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಬಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್, ಬಜರಂಗದಳದ ಮುಖಂಡ ಪ್ರದೀಪ್ ಪಂಪ್‌ವೆಲ್, ಬಿಜೆಪಿ ಯುವ ಮೋರ್ಚಾ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಪೂಂಜಾ ಮತ್ತು ಬಜರಂಗದಳದ ದಕ್ಷಿಣ ಪ್ರಾಂತ ಗೋರಕ್ಷಾ ಪ್ರಮುಖ್ ಮುರಳಿಕೃಷ್ಣ ಹಂಸತಡ್ಕ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ಕಲ್ಲು ತೂರಾಟ ಮತ್ತು ಗಲಭೆಗೆ ಸಂಬಂಧಿಸಿದಂತೆ ಜು.8ರಂದು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರನ್ನು ಬಂಧಿಸಲು ಪೊಲೀಸರು ರಾತ್ರಿ ವೇಳೆ ಅವರ ಮನೆಗೆ ದಾಳಿ ನಡೆಸಿದ್ದರು. ಬಂಧನ ಭೀತಿಯಲ್ಲಿದ್ದ ಹಿಂದೂ ಮುಖಂಡರು ನಿರೀಕ್ಷಣಾ ಜಾಮೀನು ಕೋರಿ ಜು. 17ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಮುರಳಿಕೃಷ್ಣ, ಶರಣ್ ಪಂಪ್‌ವೆಲ್ ಮತ್ತು ಪ್ರದೀಪ್ ಪಂಪ್‌ವೆಲ್ ಒಂದೇ ಅರ್ಜಿಯಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರೆ, ಹರೀಶ್ ಪೂಂಜಾ ಮತ್ತು ಸತ್ಯಜಿತ್ ಸುರತ್ಕಲ್ ಅವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು. ಜು.17ರಂದು ನ್ಯಾಯಾಲಯ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿತ್ತು. 22 ರಂದು ವಿಚಾರಣೆ ನಡೆಸಿ ತೀರ್ಪನ್ನು ಜು.26 ಕ್ಕೆ ಕಾಯ್ದಿರಿಸಿತ್ತು. ಐದು ಜನರ ಪರವಾಗಿ ವಕೀಲ ಕೆ.ಎಸ್. ಶರ್ಮ ಅವರು ವಾದಿಸಿದ್ದರು. ರಾಜ್ಯ ಸರಕಾರ ಮತ್ತು ಬಂಟ್ವಾಳ ನಗರ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.