ಆರೋಪಿ ದಂಪತಿಗೆ ನ್ಯಾಯಾಂಗ ಬಂಧನ
ಮಂಗಳೂರು, ಜು.26: ನಕಲಿ ಚಿನ್ನ ಅಡವಿಟ್ಟು 4.5 ಕೋಟಿ ರೂ. ಸಾಲ ಪಡೆದ ಆರೋಪದ ಮೇಲೆ ಬಂಧಿತ ದಂಪತಿಯನ್ನು ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಬೊಂದೇಲ್ ಸಮೀಪದ ನಿವಾಸಿಗಳಾದ ವಿದ್ಯಾನಂದ ರಾವ್ (59) ಹಾಗೂ ಈತನ ಪತ್ನಿ ಲಲಿತಾ ರಾವ್ (52) ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿಗಳು.
ನಗರದ ಪಳ್ನೀರ್ ರಸ್ತೆಯಲ್ಲಿರುವ ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಇಟ್ಟು 4.5 ಕೋ.ರೂ. ಸಾಲ ಪಡೆದು ವಂಚಿಸಿದ್ದರು. ಈ ಬಗ್ಗೆ ಬ್ಯಾಂಕ್‌ನ ಆಡಳಿತ ಮಂಡಳಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದರು.
ಪರೀಕ್ಷನ ವಿರುದ್ಧವೂ ಶಂಕೆ: ಬ್ಯಾಂಕ್‌ನ ಚಿನ್ನ ಪರೀಕ್ಷಕ ಮಂಜುನಾಥ ರೇವಣ್‌ಕರ್ ವಿರುದ್ಧವೂ ಶಂಕೆ ವ್ಯಕ್ತವಾಗಿದ್ದು, ಆತನನ್ನು ವಿಚಾರಣೆ ನಡೆಸಲಾಗು ವುದು ಎಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೊಂದು ಪ್ರಮಾಣದ ನಕಲಿ ಚಿನ್ನವನ್ನು ಪರೀಕ್ಷಿಸುವಾಗ ಒಮ್ಮೆಯೂ ಸಂಶಯ ವ್ಯಕ್ತವಾಗದಿರುವುದು ಪೊಲೀಸರಿಗೆ ಶಂಕೆ ಉಂಟು ಮಾಡಿದೆ. ಕಂಚಿನ ಆಭರಣಕ್ಕೆ ಚಿನ್ನದ ಲೇಪನ ಹಾಕಿದ್ದರೂ ಅದನ್ನು ಪರೀಕ್ಷೆಗೊಳಪಡಿಸುವಾಗ ಗೊತ್ತಾಗಬೇಕಿತ್ತು ಎನ್ನುವುದು ಪೊಲೀಸರ ವಾದವಾಗಿದೆ.