ಬೆಳ್ತಂಗಡಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ

Update: 2017-07-26 17:23 GMT

ಬೆಳ್ತಂಗಡಿ, ಜು. 26: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನಿಲ್‌ಕುಮಾರ ಬಜಾಲ್ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸುಮಾರು 5 ಸಾವಿರ ಕೋಟಿಗೂ ಹೆಚ್ಚು ಹಣ ಕೊಳೆಯುತ್ತಿದೆ ಆದರೆ ಅರ್ಹ ಕಾರ್ಮಿಕರಿಗೆ ಇದರ ಸೌಲಭ್ಯಗಳು ದೊರೆಯುತ್ತಿಲ್ಲ. ಸರಕಾರ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಇದನ್ನು ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ಆ 7 ರಂದು ಮಂಗಳೂರಿನ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.

ವಿವಾಹ ಸಹಾಯಧನ, ಪಿಂಚಣಿ, ವೈಧ್ಯಕೀಯ ಮತ್ತು ಶೈಕ್ಷಣಿಕ ಸೌಲಭ್ಯಗಳ ಹಣ ಬಿಡುಗಡೆಯಾಗಿಲ್ಲ ಹಣ ಇದ್ದರೂ ಅದನ್ನು ಯಾಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಕಾರ್ಮಿಕರ ಸಚಿವರು ಇನ್ನಾದರೂ ಈ ಬಗ್ಗೆ ಗಮನಹರಿಸಬೇಕಾಗಿದೆ ಅಸಂಘಟಿತರಾಗಿರುವ ಕಾರ್ಮಿಕರನ್ನು ಶೋಷಿಸುವ ಪ್ರವೃತ್ತಿ ಮುಂದುವರಿಸಿದರೆ ಸಿಐಟಿಯು ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಾಧ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಿಪಿಐಎಂ ತಾಲೂಕು ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ ಬೆಳ್ತಂಗಡಿಯಲ್ಲಿನ ಕಾಮಿಕ ಇಲಾಖಾ ಕಚೇರಿಯಲ್ಲಿ ಸಿಬ್ಬಂಧಿ ಸೇರಿದಂತೆ ಎಲ್ಲ ಹುದ್ದೆಗಳೂ ಖಾಲಿಯಿದ್ದು ಕಾರ್ಮಿಕರು ಪರದಾಡಬೇಕಾಗಿದೆ ಈ ಬಗ್ಗೆ ಸರಕಾರ ಕೂಡಲೇ ಗಮನ ಹರಿಸಬೇಕು, ಕಾರ್ಮಿಕರು ನಡೆಸುವ ಹೋರಾಟಕ್ಕೆ ಪಕ್ಷ ಪೂರ್ಣ ಬೆಂಬಲ ನೀಡಲಿದೆ ಎಂದರು. ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ತಾಲೂಕು ಕಾರ್ಯದರ್ಶಿ ವಸಂತ ನಡ ಮಾತನಾಡಿದರು.

ಶಾಸಕರ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಆಗಮಿಸಿ ಕಾಮಿಕರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದರು ಬಳಿಕ ಮಾತನಾಡಿದ ಅವರು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೂಡಲೇ ಕಾರ್ಮಿಕ ಸಚಿವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ತಿಪ್ಪೇ ಸ್ವಾಮಿ, ಕಾರ್ಮಿಕ ನಿರೀಕ್ಷಕ ಗಣಪತಿಹೆಗ್ಡೆ ಭೇಟಿನೀಡಿ ಮಾತುಕತೆ ನಡೆಸಿದರು. ಪ್ರತಿಭಟನಾಕಾರರು ಬಳಿಕ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಕೃಷ್ಣ ನೆರಿಯ, ಚನಿಯಪ್ಪ ಧರ್ಮಸ್ಥಳ, ಧರ್ಮರಾಜ್ ಕಾರಂತೂರು, ಹೈದರಾಲಿ ಕೊಯ್ಯೂರು, ಶಾಂತಿರಾಜ್ ನಿಟ್ಟಡೆ, ವಿಜಯ ನಾವೂರು, ಮಧುಸೂದನ್ ಕಲ್ಮಂಜ, ರೋಹಿಣಿ ಯಶೋಧ ಶೇಖರ ಲಾಯಿಲ ಮತ್ತಿತರರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News