×
Ad

ನಿವೃತ್ತ ಯೋಧ ಕ್ಯಾ.ಬಿ.ಎಸ್.ಬಾಲಕೃಷ್ಣ ರೈಗೆ ಸನ್ಮಾನ

Update: 2017-07-26 23:10 IST

ಉಳ್ಳಾಲ, ಜು. 26: ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶದ ವೀರ ಯೋಧರು ಎಂತಹ ಸಂದಿಗ್ಧ ಪ್ರದೇಶದಲ್ಲಿ ವೈರಿಗಳ ವಿರುದ್ಧ ಹೋರಾಡಿ ಬಲಿದಾನಗಳನ್ನೂ ನೀಡಿ ವಿಜಯವನ್ನು ತಮ್ಮದಾಗಿಸಿದರು ಎಂಬುದರ ಮಹತ್ವವನ್ನು ಅರಿಯಲು ಪ್ರತಿಯೊಬ್ಬ ಭಾರತೀಯನೂ ಕಾರ್ಗಿಲ್ ಪ್ರದೇಶವನ್ನು ಸಂದರ್ಶಿಸಬೇಕೆಂದು ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ನಿವೃತ್ತ ಸೇನಾನಿ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಕಾರ್ಗಿಲ್ ವಿಜಯೋತ್ಸವ ಆಚರಣೆ ಪ್ರಯುಕ್ತ ಉಳ್ಳಾಲದ 'ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ'ದ ವತಿಯಿಂದ ಸೋಮೇಶ್ವರದ ನಿವೃತ್ತ ಸೇನಾನಿ ಶತಾಯುಷಿ ಕ್ಯಾ.ಬಿ.ಎಸ್.ಬಾಲಕೃಷ್ಣ ರೈಯವರಿಗೆ ಅವರ ಸ್ವಗೃಹದಲ್ಲೇ ಬುಧವಾರ ನೆರವೇರಿದ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಕಾರ್ಗಿಲ್ ಯುದ್ಧದಲ್ಲಿ ದೇಶದ ಒಟ್ಟು 527 ಮಂದಿ ಸೈನಿಕರು ವೀರ ಮರಣವನ್ನಪ್ಪಿದ್ದರು. ಅವರು ಅಂದು ದೇಶಕ್ಕಾಗಿ ನೀಡಿದ ಬಲಿದಾನದ ಮಹತ್ವವನ್ನು ಅರಿಯುವ ಕೆಲಸ ನಮ್ಮಿಂದಾಗಬೇಕು. ಹಿರಿಯರೂ ಶತಾಯುಷಿಗಳಾದ ಬಾಲಕೃಷ್ಣ ರೈ ಅವರು ಸ್ವತಂತ್ರ ಪೂರ್ವದಲ್ಲೇ ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಿದ ಶ್ರೇಷ್ಟ ವ್ಯಕ್ತಿಯಾಗಿದ್ದು, ಎರಡನೇ ಮಹಾಯುದ್ಧದಲ್ಲೂ ಭಾಗವಹಿಸಿದ್ದರು. ಇಂತಹ ಮಹಾನ್ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವಂತಹ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು.

ಕರಾವಳಿ ಸಾಂಸ್ಕೃತಿಕ ಪರಿಷತ್‌ನ ಅಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡಿ ಪ್ರತಿ ವರುಷವೂ ಪ್ರತಿಷ್ಟಾನದ ವತಿಯಿಂದ ಕಾರ್ಗಿಲ್ ವಿಜಯ್ ದಿವಸದಂದು ವೀರ ಯೋಧರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಡೆಸಲಾಗುತ್ತಿದೆ. ನಿವೃತ್ತ ಸೇನಾನಿ ಬಾಲಕೃಷ್ಣ ರೈ ಅವರು ವೀರ ಯೋಧನಾಗಿದ್ದು ನಿವೃತ್ತಿ ನಂತರವೂ ಎನ್‌ಸಿಸಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು ಅನೇಕ ಧಾರ್ಮಿಕ, ಸಾಮಾಜಿಕ ಸಂಘಟನೆಗಳನ್ನು ಮುನ್ನಡೆಸಿದ ಮಹಾನ್ ವ್ಯಕ್ತಿಯಾಗಿದ್ದು ಅಂತವರನ್ನು ಗೌರವಿಸುವುದು ನಮ್ಮ ಪ್ರತಿಷ್ಟಾನಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದರು.

 ನಿವೃತ್ತ ಸೇನಾನಿ ಕ್ಯಾ.ಬಾಲಕೃಷ್ಣ ರೈ ಮತ್ತು ಅವರ ಪತ್ನಿ ವನಜಾಕ್ಷಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಜೆಪಿ ಜಿಲ್ಲಾ ಪ್ರಭಾರಿ ಉಸ್ತುವಾರಿಗಳಾದ ಉದಯ್ ಕುಮಾರ್ ಶೆಟ್ಟಿ, ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾದ (ಪ್ರ.ಕಾ)ಡಾ.ಕೆ.ಎ ಮುನೀರ್ ಬಾವಾ, ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಹಿರಿಯರಾದ ಸೀತಾರಾಮ ಬಂಗೇರ, ಮಾಜಿ ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಮುಖಂಡರಾದ ಲಲಿತಾ ಸುಂದರ್, ರವಿ ಶೆಟ್ಟಿ ಮಾಡೂರು, ಹರೀಶ್ ಅಂಬ್ಲಮೊಗರು, ದಯಾನಂದ ತೊಕ್ಕೊಟ್ಟು, ಗಣೇಶ್ ಕಾಪಿಕಾಡು, ಜೀವನ್ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News