ದೇಶದಲ್ಲಿ ಕರ್ನಾಟಕ ಪ್ರಥಮ ಅನಿಲಯುಕ್ತ ರಾಜ್ಯ: ಸಚಿವ ಖಾದರ್

Update: 2017-07-27 13:27 GMT

ಮಂಗಳೂರು, ಜು.27: ರಾಜ್ಯದಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಸುಮಾರು 35.50 ಲಕ್ಷ ಅಡುಗೆ ಅನಿಲ ರಹಿತರಿದ್ದು, ಎಲ್ಲರಿಗೂ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು. ಆ ಮೂಲಕ ದೇಶದಲ್ಲೇ ಕರ್ನಾಟಕ ಪ್ರಥಮ ಅನಿಲಯುಕ್ತ ರಾಜ್ಯ ಎಂಬ ಖ್ಯಾತಿಗೆ ಒಳಗಾಗಲಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ಗುರುವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫಲಾನುಭವಿಗಳಿಗೆ 1940 ರೂ. ಬೆಲೆಯ ಅಡುಗೆ ಅನಿಲ ಸಂಪರ್ಕದೊಂದಿಗೆ 999 ರೂ. ವೌಲ್ಯದ 2 ಬರ್ನರ್ ಗ್ಯಾಸ್ ಸ್ಟ್ವವ್ ಉಚಿತವಾಗಿ ನೀಡಲಾಗುವುದು. ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿದ ಕುಟುಂಬದ ಮಹಿಳೆಯು ತನ್ನ ಹೆಸರಿನಲ್ಲಿ ಈ ಯೋಜನೆಯನ್ನು ಪಡೆದುಕೊಳ್ಳಬಹುದು. ಅಂದರೆ 18 ವರ್ಷದ ಮೇಲ್ಪಟ್ಟ ಮಹಿಳಾ ಸದಸ್ಯರು (ಮಹಿಳೆಯರಿಲ್ಲದಿದ್ದರೆ 18 ವರ್ಷ ಮೇಲ್ಪಟ್ಟ ಪುರುಷರು) ತಮ್ಮ ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಖಾಸಗಿ ಫ್ರಾಂಚೈಸಿ ಕೇಂದ್ರ, ತಾಲೂಕು ಕಚೇರಿ, ಗ್ರಾಮ ಪಂಚಾಯತ್ ಕಚೇರಿ, ಜನಸ್ನೇಹಿ ಕೇಂದ್ರ, ಬೆಂಗಳೂರು ಒನ್/ ಕರ್ನಾಟಕ ಒನ್ ಕೇಂದ್ರಗಳಲ್ಲಿ 20 ರೂ. ಪಾವತಿಸಿ ಅರ್ಜಿ ಸಲ್ಲಿಸಬಹುದು. ಪರಿಶೀಲನೆಯ ಬಳಿಕ 15 ದಿನದೊಳಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಆ.15ರೊಳಗೆ ಚಾಲನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಆ.15ರೊಳಗೆ ಉತ್ತರ ಕರ್ನಾಟಕ ಭಾಗದ ಯಾವುದಾದರೊಂದು ಕಡೆ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿದವರೂ ಅರ್ಜಿ ಹಾಕಬಹುದು: ಕೇಂದ್ರ ಸರಕಾರದ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿದವರೂ ಮುಖ್ಯಮಂತ್ರಿಗಳ ಅಡುಗೆ ಅನಿಲ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆದರೆ, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮತ್ತೆ ಇಲ್ಲಿ ಅವಕಾಶವಿಲ್ಲ. ಕೇಂದ್ರ ಸರಕಾರ ಎಲ್ಲರಿಗೂ ಈ ಯೋಜನೆಯ ಪ್ರಯೋಜನ ಕಲ್ಪಿಸಿದ್ದರೆ ರಾಜ್ಯ ಸರಕಾರ ಮತ್ತೆ ಮುಖ್ಯಮಂತ್ರಿಗಳ ಅಡುಗೆ ಅನಿಲ ಯೋಜನೆ ಜಾರಿಗೊಳಿಸುವ ಆವಶ್ಯಕೆಯಿರಲಿಲ್ಲ ಎಂದು ಸಚಿವ ಖಾದರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜಕೀಯಕ್ಕೆ ಅವಕಾಶವಿಲ್ಲ: ಉಜ್ವಲ ಯೋಜನೆಯ ಉಜ್ವಲ ಭಾಗ್ಯ ಯೋಜನೆ ವಿತರಣೆಯಲ್ಲಿ ಬಿಜೆಪಿ ರಾಜಕೀಯ ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಜನಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ. ಇದು ಸರಿಯಾದ ಕ್ರಮವಲ್ಲ. ಇದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದ ಸಮನ್ವಯಕಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದ ಸಚಿವ ಖಾದರ್, ಅನಿಲ ಭಾಗ್ಯ ಯೋಜನೆಗೆ ಸಂಬಂಧಿಸಿ ಎಲ್ಲ ಸ್ತರದ ಜನಪ್ರತಿನಿಧಿಗಳನ್ನು ಪಕ್ಷಾತೀತವಾಗಿ ಆಹ್ವಾನಿಸುತ್ತೇವೆ. ಶಿಷ್ಟಾಚಾರ ಪಾಲಿಸುತ್ತೇವೆ. ಬಿಜೆಪಿಗರಂತೆ ನಾವು ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.

ರೈಗೆ ಗೃಹಮಂತ್ರಿ ಸಿಕ್ಕಿದರೆ ಸಂತೋಷ: ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಗೆ ರಾಜ್ಯದ ಗೃಹ ಸಚಿವ ಸ್ಥಾನ ಸಿಕ್ಕಿದರೆ ತುಂಬಾ ಸಂತೋಷ. ಅನುಭವಿ, ಹಿರಿಯ ರಾಜಕಾರಣಿಯಾದ ಅವರು ಈ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂದು ಸಚಿವ ಖಾದರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ನಗರ ಸಭೆಯ ಅಧ್ಯಕ್ಷ ಹುಸೈನ್ ಕುಂಞಿಮೋನು, ಸ್ಥಾಯಿ ಸಮಿತಿಯ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ತಾಪಂ ಸದಸ್ಯ ಜಬ್ಬಾರ್ ಬೋಳಿಯಾರ್, ಕಿನ್ಯ ಗ್ರಾಪಂ ಉಪಾಧ್ಯಕ್ಷ ಸಿರಾಜ್ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News