ಗುಂಡಿಮಜಲು ಗೋಪಾಲಕೃಷ್ಣ ಭಟ್ಟರಿಗೆ ಸಂರ್ಪಂಗಳ ಸುಬ್ರಹ್ಮಣ್ಯ ಭಟ್ ಪ್ರಶಸ್ತಿ
ಉಡುಪಿ, ಜು.27: ತೆಂಕುತಿಟ್ಟಿನ ಪ್ರಸಿದ್ಧ ಪುಂಡುವೇಷಧಾರಿ ಗುಂಡಿಮಜಲು ಗೋಪಾಲಕೃಷ್ಣ ಭಟ್, ಆರನೆಯ ವರ್ಷದ ‘ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಸಾಧಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆ.5ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪೇಜಾವರ ಮಠದ ಯತಿದ್ವಯರ ಉಪಸ್ಥಿತಿಯಲ್ಲಿ ಸಂಸ್ಮರಣ, ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಕಾರ್ಯಕ್ರಮಗಳು ಜರಗಲಿವೆ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮತ್ತು ಪ್ರಶಸ್ತಿಯ ಪ್ರವರ್ತಕರಾದ ನಳಿನಿ ಎಸ್. ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ಪ್ರವೃತ್ತರಾಗಿರುವ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರು ಎರಡು ದಶಕಗಳ ಕಾಲ ಕಟೀಲು ಮೇಳವೊಂದರಲ್ಲಿಯೇ ತಿರುಗಾಟ ನಡೆಸಿದವರು. ಯಕ್ಷಗಾನಾಚಾರ್ಯ ಪಡ್ರೆ ಚಂದುರಲ್ಲಿ ನಾಟ್ಯಾಭಿನಯವನ್ನು ಕಲಿತ ಇವರು ರಂಗನಡೆಯಲ್ಲಿ ಬಲಿಪ ನಾರಾಯಣ ಭಾಗವತರ ಶಿಷ್ಯ. ಕೋಡಂಗಿಯಿಂದ ತೊಡಗಿ ಮುಖ್ಯ ಪುಂಡು ವೇಷದವರೆಗೆ ಹಂತಹಂತಗಳಲ್ಲಿ ಮೇಲೇರಿದ ಅವರಿಗೆ ರಕ್ತರಾತ್ರಿಯ ಅಶ್ವತ್ಥಾಮ ಪ್ರಸಿದ್ಧಿ ತಂದುಕೊಂಡ ಪಾತ್ರ. ಅಭಿಮನ್ಯು, ಬಭ್ರುವಾಹನ, ಹನುಮಂತ, ಬಂಡಾಸುರ, ಚಂಡಾಸುರ ಮುಂತಾದ ಪಾತ್ರಗಳಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.
ಉಡುಪಿ ಪರಿಸರದಲ್ಲಿ ಯಕ್ಷಗಾನಕ್ಕೆ ವಿಶೇಷ ಪೋಷಕ, ಪ್ರೋತ್ಸಾಹಕರಾಗಿದ್ದ ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರ ನೆನಪಿನಲ್ಲಿ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು ಕಳೆದ ಐದು ವರ್ಷಗಳಲ್ಲಿ ಹಿರಿಯ ಹಿಮ್ಮೇಳ, ಮುಮ್ಮೇಳದ ಕಲಾವಿದರಿಗೆ ಪ್ರದಾನ ಮಾಡಲಾಗಿದೆ.