ಲೈಂಗಿಕ ಹಲ್ಲೆ: ತುರ್ತು ಸಂದೇಶ ನೀಡುವ ಸ್ಟಿಕ್ಕರ್ ಗಾತ್ರದ ಸಾಧನ

Update: 2017-07-27 14:44 GMT

ವಾಶಿಂಗ್ಟನ್, ಜು. 27: ಅಮೆರಿಕದ ಮ್ಯಾಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವಿಜ್ಞಾನಿಯೊಬ್ಬರು ಅಪಾಯದಲ್ಲಿರುವ ಮಹಿಳೆಯರಿಗೆ ಉಪಯುಕ್ತವಾಗುವಂಥ ಸಂಶೋಧನೆಯೊಂದನ್ನು ಮಾಡಿದ್ದಾರೆ.

ಎಂಐಟಿಯಲ್ಲಿ ಸಂಶೋಧನಾ ಸಹಾಯಕರಾಗಿರುವ ಮನೀಶಾ ಮೋಹನ್, ಮೈಯಲ್ಲಿ ಧರಿಸಬಹುದಾದ ಸ್ಟಿಕ್ಕರ್‌ನಂಥ ಸೆನ್ಸರ್‌ನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನವು ಸರಿಯಾದ ಸಮಯದಲ್ಲಿ ಲೈಂಗಿಕ ಹಲ್ಲೆಯನ್ನು ಪತ್ತೆಹಚ್ಚಿ ತಕ್ಷಣ ಸಮೀಪದಲ್ಲಿರುವ ಜನರು ಹಾಗೂ ಸಂತ್ರಸ್ತ ಮಹಿಳೆಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಎಚ್ಚರಿಸುತ್ತದೆ.

ಈ ಸಾಧನವನ್ನು ಸ್ಟಿಕ್ಕರ್‌ನಂತೆ ಯಾವುದೇ ಬಟ್ಟೆಗೆ ಅಂಟಿಸಬಹುದು. ಓರ್ವ ವ್ಯಕ್ತಿಯು ಸ್ವತಃ ತಾನೇ ಬಟ್ಟೆ ಬಿಚ್ಚುವುದು ಮತ್ತು ಆ ವ್ಯಕ್ತಿಯ ಬಟ್ಟೆಯನ್ನು ಬಲವಂತವಾಗಿ ಬಿಚ್ಚುವುದು- ಈ ಎರಡರ ನಡುವಿನ ವ್ಯತ್ಯಾಸವನ್ನು ಈ ಸಾಧನ ಗುರುತಿಸುವಂತೆ ತರಬೇತಿ ನೀಡಬಹುದಾಗಿದೆ.

    ಹೀಗೆ ತರಬೇತಿ ಪಡೆದ ಸಾಧನವು ಲೈಂಗಿಕ ಹಲ್ಲೆಯ ಲಕ್ಷಣಗಳನ್ನು ಗುರುತಿಸುತ್ತದೆ. ಸಂತ್ರಸ್ತೆಯು ಪ್ರಜ್ಞಾಹೀನರಾಗಿದ್ದರೂ ಹಾಗೂ ಅಪ್ರಾಪ್ತರು, ಹಾಸಿಗೆ ಹಿಡಿದ ರೋಗಿಗಳು ಅಥವಾ ಅಮಲೇರಿದ ಸ್ಥಿತಿಯಲ್ಲಿರುವ ವ್ಯಕ್ತಿಗಳು ಸೇರಿದಂತೆ ಆಕ್ರಮಣಕಾರಿಯ ವಿರುದ್ಧ ಹೋರಾಡುವ ಸ್ಥಿತಿಯಲ್ಲಿರದವರ ಮೇಲೆ ನಡೆಯುವ ಲೈಂಗಿಕ ಹಲ್ಲೆಯನ್ನೂ ಅದು ಗುರುತಿಸುತ್ತದೆ.

ಈ ಸಂದರ್ಭಗಳಲ್ಲಿ ಸ್ಮಾರ್ಟ್‌ಫೋನ್ ಆ್ಯಪ್‌ನೊಂದಿಗೆ ಸಂಪರ್ಕಿಸಲ್ಪಟ್ಟ ಬ್ಲೂಟೂತ್ ದೊಡ್ಡ ಸದ್ದು ಮಾಡಿ ಪಕ್ಕದಲ್ಲಿರುವ ಜನರನ್ನು ಎಚ್ಚರಿಸುತ್ತದೆ ಹಾಗೂ ಮುಂಚಿತವಾಗಿ ದಾಖಲಾದ ಕುಟುಂಬ ಸದಸ್ಯರು ಅಥವಾ ತುರ್ತು ಸೇವೆಗಳ ಫೋನ್ ಸಂಖ್ಯೆಗಳಿಗೆ ಅಪಾಯದ ಸಂದೇಶಗಳನ್ನು ಕಳುಹಿಸುತ್ತದೆ.

ಸೆನ್ಸರ್ ಹೀಗೆ ಕೆಲಸ ಮಾಡುತ್ತದೆ

ಲೈಂಗಿಕ ಹಲ್ಲೆಯ ಬಗ್ಗೆ ಎಚ್ಚರಿಕೆ ನೀಡುವ ಸೆನ್ಸರ್ ಎರಡು ಸ್ಥಿತಿ (ಮೋಡ್)ಗಳಲ್ಲಿ ಕೆಲಸ ಮಾಡುತ್ತದೆ. ಮೊದಲನೆಯದು ಪ್ಯಾಸಿವ್ ಮೋಡ್. ಈ ಸ್ಥಿತಿಯಲ್ಲಿ ಈ ಸಾಧನವನ್ನು ಧರಿಸಿದ ವ್ಯಕ್ತಿಯು ಅಪಾಯದ ಸನ್ನಿವೇಶ ಎದುರಾದಾಗ ಪ್ರಜ್ಞೆಯಲ್ಲಿ ಇರುತ್ತಾರೆ ಹಾಗೂ ಪೂರ್ವ ದಾಖಲಿತ ಕುಟುಂಬ ಸದಸ್ಯರು ಅಥವಾ ತುರ್ತು ಸೇವೆಗಳಿಗೆ ಅವರೇ ಅಪಾಯ ಸಂದೇಶಗಳನ್ನು ಕಳುಹಿಸುತ್ತಾರೆ ಎಂದು ಭಾವಿಸಲಾಗುತ್ತದೆ.

 ಎರಡನೆಯದು ಆ್ಯಕ್ಟಿವ್ ಮೋಡ್. ಈ ಸ್ಥಿತಿಯಲ್ಲಿ ಹೊರಗಿನ ವಾತಾವರಣದಿಂದ ಆಕ್ರಮಣದ ಸೂಚನೆಗಳನ್ನು ಪತ್ತೆಹಚ್ಚಲು ಸೆನ್ಸರ್ ಪ್ರಯತ್ನಿಸುತ್ತದೆ.

ಉದಾಹರಣೆಗೆ, ಸಂತ್ರಸ್ತೆಯ ದೇಹದಿಂದ ಯಾರಾದರೂ ಬಟ್ಟೆಯನ್ನು ತೆಗೆಯಲು ಪ್ರಯತ್ನಿಸಿದರೆ, ಇದನ್ನು ಒಪ್ಪಿಗೆಯಿಂದ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸುವಂತೆ ಸಂತ್ರಸ್ತೆಯ ಸ್ಮಾರ್ಟ್‌ಫೋನ್‌ಗೆ ಸಂದೇಶ ಕಳುಹಿಸಲಾಗುತ್ತದೆ.

ಇದಕ್ಕೆ ಸಂತ್ರಸ್ತೆಯು 30 ಸೆಕೆಂಡ್‌ಗಳಲ್ಲಿ ಪ್ರತಿಕ್ರಿಯಿಸದಿದ್ದರೆ, ಫೋನ್ ದೊಡ್ಡದಾಗಿ ಸದ್ದು ಮಾಡಿ ಪಕ್ಕದವರನ್ನು ಎಚ್ಚರಿಸುತ್ತದೆ.

ಮುಂದಿನ 20 ಸೆಕೆಂಡ್‌ಗಳಲ್ಲಿ ಪೂರ್ವನಿಗದಿತ ಪಾಸ್‌ವರ್ಡ್ ಮೂಲಕ ಇದನ್ನು ನಿಲ್ಲಿಸಲು ಸಂತ್ರಸ್ತೆ ವಿಫಲವಾದರೆ, ಸ್ಮಾರ್ಟ್‌ಫೋನ್ ಆ್ಯಪ್ ಸ್ವಯಂಪ್ರೇರಿತವಾಗಿ ಕುಟುಂಬ ಸದಸ್ಯರು, ಸ್ನೇಹಿತರಿಗೆ ಸಂತ್ರಸ್ತೆಯು ಇರುವ ಸ್ಥಳದ ವಿವರಗಳ ಸಮೇತ ಅಪಾಯ ಸಂದೇಶಗಳನ್ನು ಕಳುಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News