ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ತನಿಖೆಗೆ ವಿವಿಧ ಸಂಘಟನೆಗಳ ಆಗ್ರಹ
ಮಂಗಳೂರು, ಜು. 27: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ 10ನೆ ತರಗತಿ ವಿದ್ಯಾರ್ಥಿನಿಯದ್ದು ಅಸಹಜ ಸಾವು ಎಂದಿರುವ ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ವಿದ್ಯಾರ್ಥಿನಿಯ ಹೆತ್ತವರು ಇದೊಂದು 'ಕೊಲೆ' ಎಂದು ಆರೋಪಿಸಿದ್ದಾರೆ. ಈ ಬಗ್ಗೆ ನ್ಯಾಯಯುತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದೆ.
ಕಾವ್ಯಾ ಆತ್ಮಹತ್ಯೆಯ ಪ್ರಕರಣದಲ್ಲಿ ಆಳ್ವಾಸ್ ಅಧಿಕಾರಿಗಳು ಅನುಮಾನಾಸ್ಪದವಾಗಿ ನಡೆದುಕೊಂಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಸರಕಾರ ನ್ಯಾಯಯುತ ತನಿಖೆ ನಡೆಸಬೇಕು. ಕಾವ್ಯಾ ಹೆತ್ತವರಿಗೆ ನ್ಯಾಯ ಕೊಡಿಸಬೇಕು ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.
ಎಸ್‌ಎಫ್‌ಐ: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆಯ ಬಗ್ಗೆ ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣವನ್ನು ಸೂಕ್ತ ತನಿಖೆಗೊಳಪಡಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ.) ದ.ಕ. ಜಿಲ್ಲಾ ಅಧ್ಯಕ್ಷ ನಿತಿನ್ ಕುತ್ತಾರ್ ಒತ್ತಾಯಿಸಿದ್ದಾರೆ.