ಸದನ ಸಮಿತಿ ಅಹವಾಲು ಸ್ವೀಕಾರ ಸಭೆ
ಕಾಸರಗೋಡು,ಜು.27 : ಎಂಡೋ ಸಂತ್ರಸ್ಥರ ಸಾಲ ಮನ್ನಾಕ್ಕೆ 7.56 ಕೋಟಿ ರೂ . ಒದಗಿಸಲು ಸರಕಾರಕ್ಕೆ ಶಿಫಾರಸು ಮಾಡಲು ಗುರುವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸದನ ಸಮಿತಿ ಅಹವಾಲು ಸ್ವೀಕಾರ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮಹಿಳೆಯರ ,ಮಕ್ಕಳ , ವಿಕಲಚೇತನರ ಕಲ್ಯಾಣಕ್ಕಿರುವ ಸದನ ಸಮಿತಿ ಅಧ್ಯಕ್ಷೆ ಹಾಗೂ ಶಾಸಕಿ ಐಷಾ ಪೋಟಿ ಅಧ್ಯಕ್ಷತೆ ವಹಿಸಿದ್ದರು.
ಎಲ್ಲಾ ಎಂಡೋಸಲ್ಫಾನ್ ಸಂತ್ರಸ್ತರನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಹಾಗೂ ಅರ್ಹರಿಗೆ ಸವಲತ್ತು ಕೈ ತಪ್ಪಿ ಹೋಗದಂತೆ ಹಾಗೂ ಕೀಟನಾಶಕ ಸಿಂಪಡಣೆ ಪರಿಣಾಮ ಉಂಟಾಗಿರುವ ದುಷ್ಪಾರಿಣಾಮದ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿತು.
ಮುಳಿಯಾರಿನಲ್ಲಿ ಎಂಡೋ ಸಂತ್ರಸ್ಥ ಗ್ರಾಮ ನಿರ್ಮಾಣಕ್ಕೆ ಶೀಘ್ರ ಆಡಳಿತಾನುಮತಿ ಲಭಿಸಲು ಕ್ರಮ ತೆಗೆದುಕೊಳ್ಳುವಂತೆ ಸಮಿತಿ ಶಿಫಾರಸು ಮಾಡಿತು.
ಸಂತ್ರಸ್ಥ ಕುಟುಂಬಕ್ಕೆ ಉದ್ಯೋಗ ಲಭಿಸಲು ಕ್ರಮ ತೆಗೆದುಕೊಳ್ಳಬೇಕು. ಭೂ ರಹಿತ ಎಲ್ಲರಿಗೂ ಮನೆ ಒದಗಿಸಲು ವಿಶೇಷ ಆದ್ಯತೆ ನೀಡಲಾಗುವುದು.
ಲೈಫ್ ಯೋಜನೆಯಲ್ಲಿ ವಿಶೇಷ ಆದ್ಯತೆ ನೀಡಬೇಕು. ಎಂಡೊ ಸಂತ್ರಸ್ಥ ರಿಗೆ ಸವಲತ್ತುಗಳ ಅರಿವು ಮೂಡಿಸಲು ತಿಳುವಳಿಕಾ ಶಿಬಿರ ಆಯೋಜಿಸಲು , ಅರ್ಹ ಎಲ್ಲರಿಗೂ ಸೌಲಭ್ಯ ಲಭಿಸುವಂತಹ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಮಿತಿ ಸಲಹೆ ನೀಡಿತು.
ಒಟ್ಟು 88 ದೂರುಗಳು ಸದನ ಸಮಿತಿಗೆ ಲಭಿಸಿದವು.
ಸಭೆಯಲ್ಲಿ ಸಮಿತಿ ಸದಸ್ಯರಾದ ಪಿ . ಅಬ್ದುಲ್ ಹಮೀದ್ , ಪ್ರೊ. ಎನ್ . ಜಯರಾಜ್ , ಕೆ.ಕೆ ರಾಮಚಂದ್ರನ್ ನಾಯರ್ , ಇ.ಕೆ ವಿಜಯನ್, ಜಿಲ್ಲಾಧಿಕಾರಿ ಕೆ.ಜೀವನ್ ಬಾಬು , ವಿಧಾನಸಭಾ ಉಪ ಕಾರ್ಯದರ್ಶಿ ರೆಜಿ ಬಿ., ಜಿಲ್ಲಾ ಪೊಲೀಸ್ ಮುಖ್ಯಸ್ಥ ಕೆ.ಜಿ ಸಿಮೋನ್, ಹೆಚ್ಚುವರಿ ದಂಡಾಧಿಕಾರಿ ಕೆ . ಅಂಬುಜಾಕ್ಷನ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.