×
Ad

ರಾಜ್ಯ ಸರಕಾದ ಆದೇಶ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2017-07-27 20:16 IST

ಬೆಳ್ತಂಗಡಿ, ಜು.27: ಸರಕಾರಿ ಕಾಲೇಜುಗಳನ್ನು ಬೆಳಿಗ್ಗೆ 8 ಗಂಟೆಗೇ ಪ್ರಾರಂಭಿಸಬೇಕು ಎಂಬ ರಾಜ್ಯ ಸರಕಾರದ ಆದೇಶವನ್ನು ವಿರೋಧಿಸಿ ಮಂಗಳವಾರ ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತರಗತಿಯನ್ನು ಬಹಿಸ್ಕರಿಸಿ ಪ್ರತಿಭಟನೆ ನಡೆಸಿದರು.

ಇದೀಗ ಎರಡನೇ ಬಾರಿಗೆ ವಿದ್ಯಾರ್ಥಿಗಳು ತರಗತಿ ಬಹಿಸ್ಕರಿಸಿ ಪ್ರತಿಭಟನೆ ನಡೆಸಿದರು. ಕಾಲೇಜಿಗೆ ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳೇ ಹೆಚ್ಚಾಗಿದ್ದು ಬೆಳಿಗ್ಗೆ 8 ಗಂಟೆಗೆ ಕಾಲೇಜು ತಲುಪುವುದು ಅಸಾಧ್ಯವಾಗುತ್ತದೆ. ಪರೀಕ್ಷೆಗಳಿಗೆ ಹಾಜರಾಗುವುದು ಕೂಡ ಕಷ್ಟವಾಗಲಿದೆ. ಇದರಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವ ಬದಲು ಗ್ರಾಮೀಣ ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಿಗೆ ಬರುವುದು ಕಡಿಮೆಯಾಗುವ ಮತ್ತು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಗಳೇ ಹೆಚ್ಚಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಿಯಾದ ಸರಕಾರಿ ಬಸ್ಸಿನ ವ್ಯವಸ್ಥೆಯೂ ಇಲ್ಲ. ಸುಮಾರು 40 ಕಿ. ಮೀ. ದೂರದಿಂದ ಬರಬೇಕಾಗುತ್ತದೆ. ಅಲ್ಲದೆ ಕೆಲವು ವಿದ್ಯಾರ್ಥಿಗಳಿಗೆ ವಾಹನಗಳ ವ್ಯವಸ್ಥೆ ಇಲ್ಲದೆ ನಡೆದುಕೊಂಡು ಬರಬೇಕಾಗಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಮಸ್ಯೆಯನ್ನು ಮನಗಂಡು ಯೋಜನೆಯನ್ನು ರೂಪಿಸಲಿ. ನಗರ ಭಾಗದ ಜನರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಹೀಗಾಗಿ ಈ ಆದೇಶವನ್ನು ಸರಕಾರ ಕೂಡಲೇ ಹಿಂಪಡೆಯಬೇಕು. ಸರಕಾರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಮಸ್ಯೆ ಸ್ಪಂದನೆ ನೀಡುತ್ತಿಲ್ಲ. ಮೊದಲಿನ ಸಮಯಕ್ಕೆ ಕಾಲೇಜು ಆರಂಭವಾಗಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News